
ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಮೇಗಳದೊಡ್ಡಿ ಗ್ರಾಮದಲ್ಲಿ ರಾಗಿ ಮೆದೆ ಮೇಲೆ ಕಾಡಾನೆಗಳು ಭಾನುವಾರ ರಾತ್ರಿ ದಾಳಿ ನಡೆಸಿವೆ.
ಮೇಗಳದೊಡ್ಡಿ ಗ್ರಾಮದ ರೈತ ರಾಜಪ್ಪ ಎಂಬುವರಿಗೆ ಸೇರಿದ ರಾಗಿ ಮೆದೆ ನಾಶವಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿ ಬೆಳೆದಿದ್ದಂತಹ ರಾಗಿಯನ್ನು ಕಟಾವು ಮಾಡಿ ಒಕ್ಕಣೆ ಮಾಡಲು ಜಮೀನಿನಲ್ಲಿ ಮೆದೆ ಮಾಡಲಾಗಿತ್ತು.
ರಾಗಿಮೆದೆ ಮಾಡಿದ ಮೇಲೂ ಕಾಡಾನೆಗಳು ದಾಳಿ ನಡೆಸಿ ರಾಗಿ ತಿಂದು ನಾಶ ಮಾಡುತ್ತಿರುವುದರಿಂದ ಆನೆಗಳು ಅದನ್ನು ತಿನ್ನದಂತೆ ಪ್ರತಿ ದಿನ ರೈತರು ಜಮೀನಿನಲ್ಲಿ ಕಾಯುತ್ತಿದ್ದರು. ಕಾವಲಿ ನಡೆವೆಯು ಕಣ್ತಪ್ಪಿಸಿ ಆನೆಗಳ ಹಿಂಡು ರಾಗಿಮೆದೆ ತಿಂದು ನಾಶ ಮಾಡಿ ಹೋಗಿವೆ. ಈ ಸಂಬಂಧ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ರೈತರು ನೀಡಿರುವ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.