ADVERTISEMENT

ಮೂರನೇ ದಿನದ ಕನಕೋತ್ಸವ: ಗಮನಸೆಳೆದ ಕೇಶವಿನ್ಯಾಸ, ಮಹಿಳಾ ಮ್ಯಾರಾಥಾನ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 4:39 IST
Last Updated 31 ಜನವರಿ 2026, 4:39 IST
ಕನಕಪುರ ನಗರದಲ್ಲಿ ಶುಕ್ರವಾರ ನಡೆದ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡ ಸಾವಿರಾರು ಮಹಿಳೆಯರು
ಕನಕಪುರ ನಗರದಲ್ಲಿ ಶುಕ್ರವಾರ ನಡೆದ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡ ಸಾವಿರಾರು ಮಹಿಳೆಯರು   

ಕನಕಪುರ: ಕನಕೋತ್ಸವದ ಮೂರನೇ ದಿನದ ಕಾರ್ಯಕ್ರಮ ಅಕ್ಷರಶಃ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನ ಮತ್ತು ಅನಾವರಣದ ವೇದಿಕೆಗೆ ಸಾಕ್ಷಿಯಾಯಿತು.

ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿ ಕೇಶ ವಿನ್ಯಾಸ, ದಂಪತಿಗಳಿಗೆ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ, ವಾಯ್ಸ್ ಆಫ್ ಕನಕೋತ್ಸವ ಕಾರ್ಯಕ್ರಮ ಗ್ರಾಮೀಣ ಭಾಗದ ಜನರಿಗೆ ಅವಕಾಶ ಕಲ್ಪಿಸಿದವು.

ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಧರ್ಮದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು.

ADVERTISEMENT

ಕೇಶವಿನ್ಯಾಸ ಸ್ಪರ್ಧೆಯಲ್ಲಿ ಹದಿಹರೆಯದಿಂದ ವಯಸ್ಸಾದವರೆಗೂ ಪಾಲ್ಗೊಂಡು ನಗರದ ಜನತೆಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ತಮ್ಮ ಕೇಶ ವಿನ್ಯಾಸವನ್ನು ಪ್ರದರ್ಶಿಸಿದರು.

ಕೇಶ ವಿನ್ಯಾಸ ಮತ್ತು ಸಾಂಪ್ರದಾಯಿಕ ಉಡುಗೆ ತೊಡುಗೆ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಬಂದಿದ್ದರಿಂದ ಕಾರ್ಯಕ್ರಮವು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ನಡೆಯಿತು. ಎರಡು ಕಾರ್ಯಕ್ರಮವನ್ನು ಪ್ರತ್ಯೇಕ ವೇದಿಕೆಯಲ್ಲಿ ನಡೆಸಿ, ಅಂತಿಮ ಸುತ್ತಿನ ಸ್ಪರ್ಧಿಗಳನ್ನು ಒಂದೇ ವೇದಿಕೆಯಲ್ಲಿ ನಡೆಸಿ ರಾತ್ರಿ 8 ಗಂಟೆಗೆ ಮುಕ್ತಾಯಗೊಳಿಸಲಾಯಿತು.

ರಸಮಂಜರಿ ಕಾರ್ಯಕ್ರಮವು ರಾತ್ರಿ 8 ಗಂಟೆಗೆ ಪ್ರಾರಂಭಗೊಂಡು ರಾತ್ರಿ 2 ಗಂಟೆ ತನಕ ನಡೆಯಿತು. ಸಾಧು ಕೋಕಿಲ, ರಘು ದೀಕ್ಷಿತ್, ಸಂಚಿತ್ ಹೆಗ್ಡೆ, ದಿವ್ಯ ರಾಮಚಂದ್ರ, ಅಶ್ವಿನ್ ಶರ್ಮ ಸುಮಧುರ ಹಾಡುಗಳ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು.

ಶುಕ್ರವಾರ ಬೆಳಿಗ್ಗೆ ಮಹಿಳೆಯರಿಗಾಗಿ ಏರ್ಪಡಿಸಿದ್ದ ಮ್ಯಾರಥಾನ್ ಓಟದಲ್ಲಿ 3,500 ಮಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ವೇದಿಕೆಯಿಂದ ಹೊರಟು ಕುರುಪೇಟೆ ರಸ್ತೆ ಮಾರ್ಗವಾಗಿ ಬಿಜಿಎಸ್ ಬಡಾವಣೆ ಮೂಲಕ ಪೈಪ್‌ಲೈನ್ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆಗೆ ಮುಕ್ತಾಯಗೊಳಿಸಿದರು.

ವಾಯ್ಸ್ ಆಫ್ ಕನಕೋತ್ಸವ ಕಾರ್ಯಕ್ರಮ ಪ್ರಾರಂಭಗೊಂಡಿತು. ತಾಲ್ಲೂಕು ಮಟ್ಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಥಮ, ದ್ವಿತೀಯ, ತೃತೀಯ ಸ್ಪರ್ಧಿಗಳು ತಮ್ಮ ಗಾಯನದ ಮೂಲಕ ಪ್ರತಿಭೆ ಅನಾವರಣಗೊಳಿಸಿದರು.

ಶಾಲಾ ಮಕ್ಕಳಿಗಾಗಿ ಸೆಂಟ್ ಥಾಮಸ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ಮೇಳಕ್ಕೆ ತಾಲ್ಲೂಕಿನ ಶಾಲೆಯ ಮಕ್ಕಳು ಆಗಮಿಸಿ ವಿಜ್ಞಾನದ ಮಾಡೆಲ್, ವೈಜ್ಞಾನಿಕ ಪ್ರಯೋಗದ ವೀಕ್ಷಣೆ ಮಾಡಿದರು.

ವೀಕ್ಷಣೆ ಪರಿಶೀಲನೆ: ಡಿಸಿಎಂ ಡಿ.ಕೆ.ಶಿವಕುಮಾರ್ ಶುಕ್ರವಾರ ಮಧ್ಯಾಹ್ನದ ಆಗಮಿಸಿದರು. ನಡೆಯುತ್ತಿದ್ದ ಸ್ಥಳ, ಅಡಿಗೆ ತಯಾರಿ ಜಾಗ, ಊಟ ವಿತರಣೆ, ವಿಜ್ಞಾನ ಮೇಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಶಾಸಕರು ಜತೆಗಿದ್ದರು.

ಚಲನಚಿತ್ರ ನಟ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರತಿ ಸ್ಪರ್ಧೆಯಲ್ಲೂ ಮೊದಲ, ದ್ವಿತೀಯ, ತೃತೀಯ ಬಹುಮಾನದ ಜತೆಗೆ 10 ಸಮಾಧಾನಕರ ಬಹುಮಾನವನ್ನು ನೀಡಲಾಯಿತು.

ಕನಕಪುರ ಸೇಂಟ್ ಥಾಮಸ್ ಶಾಲಾವರಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ವೇಳಾದಲ್ಲಿ ಕಾರಿನ ಮೆಕ್ಯಾನಿಸಂ ಬಗ್ಗೆ ತಿಳಿಸಿಕೊಡುತ್ತಿರುವುದು
ಕಾರ್ಯಕ್ರಮದಲ್ಲಿ ಶಾಸಕರು ವಿಜ್ಞಾನ ಮೇಳದಲ್ಲಿ ಮಾಹಿತಿಯನ್ನು ಪಡೆಯುತ್ತಿರುವುದು
ಕಬಡ್ಡಿ ಪಂದ್ಯಾವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.