ADVERTISEMENT

ಕನಕಪುರ | ನೀರಿನ ಸಮಸ್ಯೆ: ನಗರಸಭೆ ಮುಂಭಾಗ ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 6:43 IST
Last Updated 17 ಜನವರಿ 2024, 6:43 IST
ಕನಕಪುರ ನಗರಸಭೆ ಮುಂಭಾಗ ಮೆಳೆಕೋಟೆ ಎಕೆ ಕಾಲೋನಿ ಮಹಿಳೆಯರು ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು
ಕನಕಪುರ ನಗರಸಭೆ ಮುಂಭಾಗ ಮೆಳೆಕೋಟೆ ಎಕೆ ಕಾಲೋನಿ ಮಹಿಳೆಯರು ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು   

ಕನಕಪುರ: ಅಸಮರ್ಪಕ ನೀರು ಪೂರೈಕೆ ವಿರೋಧಿಸಿ ಮಹಿಳೆಯರು ಮಂಗಳವಾರ ನಗರಸಭೆ ಮುಂಭಾಗದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ವಾರ್ಡ್‌ ಸದಸ್ಯರಾಗಲಿ, ನಗರಸಭೆಯಾಗಲಿ ಸಮಸ್ಯೆ ಪರಿಹಾರಕ್ಕಾಗಿ ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. 

ಮೆಳೆಕೋಟೆ ಎಕೆ ಕಾಲೋನಿಯಲ್ಲಿ ಸುಮಾರು 800 ಮನೆಗಳಿದ್ದು ಅವುಗಳಲ್ಲಿ 600 ಮನೆಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿದೆ. ಉಳಿದ 200 ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ಎಷ್ಟು ಬಾರಿ ದೂರು ನೀಡಿದರೂ ಏನು ಪ್ರಯೋಜನ ಆಗುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪ ಮಾಡಿದರು.

ADVERTISEMENT

ನಗರಸಭೆ ನಾಲ್ಕು ದಿನಕ್ಕೊಮ್ಮೆ ಕಾಲೊನಿಗೆ ಟ್ಯಾಂಕ್‌ ನೀರು ಪೂರೈಸುತ್ತಿದೆ. ವಾರ್ಡ್‌ನಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹರಿಸುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ನಗರಸಭೆ ಎಂಜಿನಿಯರ್ ರಾಘವೇಂದ್ರ, ವಿಜಯ ಕುಮಾರ್ ಸಮಸ್ಯೆಗಳನ್ನು ಆಲಿಸಿದರು. ವಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆ ಕೈ ಬಿಟ್ಟರು.

ಮೆಳೆಕೋಟೆ ಎಕೆ ಕಾಲೋನಿಯ ಶೋಭ, ಲಕ್ಷ್ಮೀದೇವಿ, ಪವಿತ್ರ, ನಿರ್ಮಲ, ಆಶಾ, ಲಕ್ಷ್ಮಿ, ಸಂಜನಾ, ವೆಂಕಟಮ್ಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.