ADVERTISEMENT

ಕಲಾಭಿರುಚಿ ಕಳೆದುಕೊಳ್ಳುತ್ತಿರುವ ಜನ: ನಾಗರಾಜ್ ಕೋಟೆ ಬೇಸರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:50 IST
Last Updated 15 ಅಕ್ಟೋಬರ್ 2025, 2:50 IST
<div class="paragraphs"><p>ರಾಮನಗರದ ಕನ್ನಿಕಾ ಮಹಲ್‌ನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಹಮ್ಮಿಕೊಂಡಿದ್ದ 13ನೇ ವರ್ಷದ ‘ಕನ್ನಡ ನಿತ್ಯೋತ್ಸವ: ರಾಜ್ಯೋತ್ಸವ ಪುರಸ್ಕಾರ ಹಾಗೂ ಗೀತ ಗಾಯನ’ ಸಮಾರಂಭದಲ್ಲಿ ಹಿರಿಯ ಹಾರ್ಮೋನಿಯಂ ಮಾಸ್ಟರ್ ನಾಗರಾಜಯ್ಯ ಅವರಿಗೆ ಗಣ್ಯರು ‘ರಾಜ್ಯೋತ್ಸವ’ ಪುರಸ್ಕಾರ ನೀಡಿ ಗೌರವಿಸಿದರು.&nbsp;</p></div>

ರಾಮನಗರದ ಕನ್ನಿಕಾ ಮಹಲ್‌ನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಹಮ್ಮಿಕೊಂಡಿದ್ದ 13ನೇ ವರ್ಷದ ‘ಕನ್ನಡ ನಿತ್ಯೋತ್ಸವ: ರಾಜ್ಯೋತ್ಸವ ಪುರಸ್ಕಾರ ಹಾಗೂ ಗೀತ ಗಾಯನ’ ಸಮಾರಂಭದಲ್ಲಿ ಹಿರಿಯ ಹಾರ್ಮೋನಿಯಂ ಮಾಸ್ಟರ್ ನಾಗರಾಜಯ್ಯ ಅವರಿಗೆ ಗಣ್ಯರು ‘ರಾಜ್ಯೋತ್ಸವ’ ಪುರಸ್ಕಾರ ನೀಡಿ ಗೌರವಿಸಿದರು. 

   

ರಾಮನಗರ: ‘ಜನ ಇತ್ತೀಚೆಗೆ ಕಲಾಭಿರುಚಿ ಕಳೆದುಕೊಳ್ಳುತ್ತಿದ್ದಾರೆ. ಮುಂಚಿನಂತೆ ಇದ್ದ ಕಲಾಭಿಮಾನ ಮತ್ತು ಕಲಾಭಿರುಚಿ ಈಗಿಲ್ಲ. ಮನರಂಜನೆ ಎಂದರೆ ಮೊಬೈಲ್ ಆಗಿದೆ. ಆಧುನಿಕ ಮನುಷ್ಯ ತನ್ನ ಜೀವನದ ಹೆಚ್ಚಿನ ಸಮಯ ಮತ್ತು ಆಸಕ್ತಿಯನ್ನು ಅದಕ್ಕೆ ಕೊಡುತ್ತಿದ್ದಾನೆ. ಇದರಿಂದ ಮನುಷ್ಯನ ನೆಮ್ಮದಿಯೂ ಕಡಿಮೆಯಾಗಿದೆ’ ಎಂದು ಸಿನಿಮಾ ನಟ ಮತ್ತು ನಿರ್ದೇಶಕ ನಾಗರಾಜ್ ಕೋಟೆ ಬೇಸರ ವ್ಯಕ್ತಪಡಿಸಿದರು.

ನಗರದ ಕನ್ನಿಕಾ ಮಹಲ್‌ನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಹಮ್ಮಿಕೊಂಡಿದ್ದ 13ನೇ ವರ್ಷದ ‘ಕನ್ನಡ ನಿತ್ಯೋತ್ಸವ: ರಾಜ್ಯೋತ್ಸವ ಪುರಸ್ಕಾರ ಹಾಗೂ ಗೀತ ಗಾಯನ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಲ್ಲಿ ಇಂದು ಪ್ರೇಕ್ಷಕರಿಗಿಂತ ಅತಿಥಿಗಳೇ ಹೆಚ್ಚಾಗಿರುತ್ತಾರೆ. ಮುಂದೊಂದು ದಿನ ಈ ಸ್ಥಿತಿ ಬದಲಾಗಲಿದೆ. ಮನುಷ್ಯ ಹಿಂದಿನ ಸಂಸ್ಕೃತಿಯನ್ನೇ ಬಯಸುತ್ತಾನೆ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ‘ಸರ್ಕಾರ ವಿವಿಧ ಕ್ಷೇತ್ರಗಳ ಮಹನೀಯರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಲೇ ಬಂದಿದೆ. ಆದರೂ ಎಷ್ಟೋ ಸಾಧಕರು ತೆರೆಮರೆಯಲ್ಲೇ ಉಳಿದಿದ್ದಾರೆ. ಸಂಘ– ಸಂಸ್ಥೆಗಳು ಅಂತಹ ಸಾಧಕರನ್ನು ಗೌರವಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಂಸ್ಕೃತಿ ಸೌರಭ ಟ್ರಸ್ಟ್ ಆ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದೆ. ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದ ಮಹನೀಯರನ್ನು ಗೌರವಿಸುತ್ತಾ ಬಂದಿದೆ. ಯಾವ ಪ್ರಶಸ್ತಿ ಪುರಸ್ಕಾರವನ್ನೂ ಅಪೇಕ್ಷಿಸದ ಈ ಸಂಸ್ಥೆಯ ಅಧ್ಯಕ್ಷರು, ಗಾಯಕರೂ ಆದ ರಾ.ಬಿ. ನಾಗರಾಜ್ ಅವರ ಸೇವೆ ಶ್ಲಾಘನೀಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ‘ಎಷ್ಟೋ ಸಂಘ ಸಂಸ್ಥೆಗಳು ಹುಟ್ಟಿ ಕಣ್ಮರೆಯಾಗುಗುತ್ತವೆ. ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಟ್ರಸ್ಟ್ ಆರಂಭದ ದಿನಗಳಿಂದಲೂ ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇವರ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು’ ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ ಅಧ್ಯಕ್ಷ ರಾ.ಬಿ. ನಾಗರಾಜ್, ‘ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಅಕ್ಟೋಬರ್ ತಿಂಗಳಲ್ಲಿ ಕನ್ನಡ ನಿತ್ಯೋತ್ಸವವನ್ನಾಗಿ ಕಳೆದ ಹದಿಮೂರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವಿವಿಧ ಕ್ಷೇತ್ರದ ಮಹನೀಯರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ’ ಎಂದು ತಿಳಿಸಿದರು.

ಗಾಯಕರಾದ ಎಸ್. ರಘುನಾಥ್, ರಾಧಾಕೃಷ್ಣ ಸಾಗರ, ಕೆಂಗಲ್ ವಿನಯ್ ಕುಮಾರ್, ಬೊಮ್ಮನಹಳ್ಳಿ ಗೋಪಾಲ್, ಸೌಜನ್ಯ ಕೃಷ್ಣಮೂರ್ತಿ, ಹರ್ಷವರ್ಧನ್, ನೂಪುರ ಸಂಗೀತ ವಿಜಯೇಂದ್ರ ಸಾರಥ್ಯದಲ್ಲಿ ಸಂಜಿತ್, ಧನ್ಯಂತ್, ಧೀಕ್ಷಿತ್ ತಂಡ ಗೀತಗಾಯನ‌ ನಡೆಸಿ ಕೊಟ್ಟಿತು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಸಹಾಯಕ ಆಯುಕ್ತ ಎಚ್. ನಾಗರಾಜು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೇಗೌಡ , ವಾಸವಿ ವಿಧ್ಯಾನಿಕೇತನ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್. ನಾಗೇಶ್, ಜಿಲ್ಲಾ ಪತ್ರ ಬರಹಗಾರ ಸಂಘದ ಪ್ರದಾನ ಕಾರ್ಯದರ್ಶಿ ಎಚ್.ಎನ್. ರಮೇಶ್, ಸಾಹಿತಿ, ಡಾ. ಎಚ್.ವಿ. ಮೂರ್ತಿ, ಡಿ. ದೇವರಾಜ ಅರಸು ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಚ್. ಸುರೇಶ್, ಮುಖಂಡ ರುದ್ರೇಶ್ ಇದ್ದರು. ರಾಜಶೇಖರ ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಕಾರ್ಯದರ್ಶಿ ಎಚ್.ಬಿ. ಸಿದ್ಧರಾಜು ವಂದಿಸಿದರು.

ಎಂಟು ಮಂದಿಗೆ ಪುರಸ್ಕಾರ

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎಂ. ರಂಗನಾಥ್ ರಾಜ್ ಮಕ್ಕಳ ಚಿಕಿತ್ಸಾಲಯದ ವೈದ್ಯೆ ರಾಜಶ್ರೀ ಸಮಾಜ ಸೇವಕ ಪಿ.ವಿ. ಪ್ರಭಾಕರ ಶೆಟ್ಟಿ ಅಂತರರಾಷ್ಟ್ರೀಯ ಕುಸ್ತಿಪಟು ಕೆ.ಎನ್. ವಿಜಯಕುಮಾರ್ ಸ್ನೇಹ ಕಲಾ ಪ್ರತಿಷ್ಠಾನದ ಅಧ್ಯಕ್ಷ ಕುಣಿಗಲ್ ದಿನೇಶ್ ಕುಮಾರ್ ಹಿರಿಯ ಹಾರ್ಮೋನಿಯಂ ಮಾಸ್ಟರ್ ನಾಗರಾಜಯ್ಯ ವಕೀಲ ಎಸ್. ನಾಗರಾಜು ಆಧ್ಯಾತ್ಮಿಕ ಚಿಂತಕ ಮೆಣಸಿಗನಹಳ್ಳಿ ಪ್ರಸನ್ನ ಗವಿಮಠದ ಶ್ರೀನಿವಾಸ್ ಅವರಿಗೆ ಗಣ್ಯರು ‘ರಾಜ್ಯೋತ್ಸವ’ ಪುರಸ್ಕಾರ ಪ್ರದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.