ADVERTISEMENT

ರಾಮನಗರ: 'ಏಕೀಕರಣಕ್ಕೆ ಹೋರಾಡಿದವರನ್ನು ಸ್ಮರಿಸಿ'

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 5:50 IST
Last Updated 2 ನವೆಂಬರ್ 2023, 5:50 IST
ಕುದೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕುದೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.   

ಕುದೂರು: ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗವನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ ಎಂದು ಕುದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಅಭಿಪ್ರಾಯಪಟ್ಟರು.

ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಾತನಾಡಿ, ನಾಡಿನ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಕನ್ನಡ ಉಳಿಸುವ, ಬೆಳೆಸುವ ದೃಢಸಂಕಲ್ಪ ಸದಾ ನಮ್ಮದಾಗಿರಲಿ ಎಂದರು.

ADVERTISEMENT

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಪಂಚಾಯಿತಿ ಕಛೇರಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣ ಉಪಯೋಗಿಸಿ ರಂಗೋಲಿಯನ್ನು ಮಹಿಳೆಯರು ಬಿಡಿಸಿದರು. ಪಟ್ಟಣದ ಶ್ರೀ ರಾಮಲೀಲಾ ಕ್ರೀಡಾಂಗಣದಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟವನ್ನು ಹಾರಿಸುವ ಮೂಲಕ ಸುವರ್ಣ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.

ಕುದೂರು ಪಟ್ಟಣದ ಶ್ರೀ ರಾಮಲೀಲಾ ಕ್ರೀಡಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಳದಿ ಕೆಂಪು ಬಣ್ಣಗಳ ಬಾವುಟಗಳನ್ನು ಹಾರಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಯಾ ಜ್ಯೋತಿ, ಸದಸ್ಯರಾದ ಕೆ.ಬಿ. ಬಾಲರಾಜು, ರಮೇಶ್, ಕೆ.ಟಿ. ವೆಂಕಟೇಶ್, ಪಂಚಾಯಿತಿ ಸಿಬ್ಬಂದಿ, ಪೌರಕಾರ್ಮಿಕರು, ಮುಖಂಡರು, ಸಾರ್ವಜನಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.