ADVERTISEMENT

ಮೇಕೆದಾಟು ಕಡಿಮೆಯಾಗದ ಪಾದಯಾತ್ರೆ ಹುಮ್ಮಸ್ಸು

ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಪಾದಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:19 IST
Last Updated 12 ಜನವರಿ 2022, 5:19 IST
ಪಾದಯಾತ್ರೆಯಲ್ಲಿ ಬಂದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಸೇಬಿನ ಹಾರ ಹಾಕಲು ಅಭಿಮಾನಿಗಳು ಜೆಸಿಬಿ ಯಂತ್ರ ಮತ್ತು ಕ್ರೈನ್‌ ಬಳಸಿದರು. ಪಕ್ಕದಲ್ಲಿಯೇ ವಿದ್ಯುತ್‌ ಪರಿವರ್ತಕವಿತ್ತು
ಪಾದಯಾತ್ರೆಯಲ್ಲಿ ಬಂದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಸೇಬಿನ ಹಾರ ಹಾಕಲು ಅಭಿಮಾನಿಗಳು ಜೆಸಿಬಿ ಯಂತ್ರ ಮತ್ತು ಕ್ರೈನ್‌ ಬಳಸಿದರು. ಪಕ್ಕದಲ್ಲಿಯೇ ವಿದ್ಯುತ್‌ ಪರಿವರ್ತಕವಿತ್ತು   

ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ಮಾಡಲು ಕಾಂಗ್ರೆಸ್‌ ಪ್ರಾರಂಭಿಸಿರುವ ಪಾದಯಾತ್ರೆಯು 3ನೇ ದಿನಕ್ಕೆ ಕಾಲಿಟ್ಟು ಮಂಗಳವಾರ ಕನಕಪುರ ನಗರದಿಂದ ಪಾದಯಾತ್ರೆ ಆರಂಭಗೊಂಡಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 3ನೇ ದಿನದ ಪಾದಯಾತ್ರೆಗೆ ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ 11 ಗಂಟೆಗೆ ಚಾಲನೆ ನೀಡಿದರು.

ಇಬ್ಬರು ನಾಯಕರು ಸೇರಿದಂತೆ ಪಕ್ಷದ ಎಂಎಲ್‌ಎ ಮತ್ತು ಎಂಎಲ್‌ಸಿಗಳು, ಮುಖಂಡರು ನಗರದ ಹೊರ ವಲಯದವರೆಗೂ ತೆರೆದ ವಾಹನದಲ್ಲಿ ನಿಂತು ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ನಗರದ ಉದ್ದಕ್ಕೂ ನಾಯಕರ ಮೇಲೆ ಪಟ್ಟಣದ ಜನತೆ ಪುಷ್ಪಾರ್ಚನೆ ಮಾಡಿ ಅದ್ದೂರಿ ಸ್ವಾಗತ ನೀಡಿದರು.

ADVERTISEMENT

ಮೆಳೆಕೋಟೆಯ ನಂತರ ಎಲ್ಲ ನಾಯಕರು ರಸ್ತೆಯಲ್ಲಿ ನಡೆದುಕೊಂಡರು ಹೋದರು. ಎಂದಿನಂತೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರಿಗಳು ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜತೆಯಲ್ಲಿ ನಡಿಗೆಯ ಮೂಲಕ ಪಾದಯಾತ್ರೆ ನಡೆಸಿದರು.

ಹೊಸಕೋಟೆ ಗ್ರಾಮದವರೆಗೂ ನಡೆದ ಡಿ.ಕೆ.ಶಿವಕುಮಾರ್‌ ಸ್ವಲ್ಪ ಬಳಲಿದಂತಾಗಿ ಹೊಸಕೋಟೆ ಕಾಂಗ್ರೆಸ್‌ ಮುಖಂಡ ಪುರುಷೋತ್ತಮ್‌ ಅವರ ಮನೆಗೆ ವಿಶ್ರಾಂತಿಗೆ ಮೊರೆಹೋದರೆ ಅವರೊಂದಿಗೆ ಸಿದ್ದರಾಮಯ್ಯ ಅವರೂ ವಿಶ್ರಾಂತಿ ತೆಗೆದುಕೊಂಡರು.

ಸಾವಿರಾರು ಸಂಖ್ಯೆಯಲ್ಲಿ ಕಾಲ್ನಡಿಗೆ ಮೂಲಕ ಬರುತ್ತಿದ್ದ ಪಾದಯಾತ್ರಿಕರಿಗೆ ಬಾಯಾರಿಕೆ ನೀಗಿಸಲು ಅಲ್ಲಲ್ಲಿ ಸ್ಟಾಲ್‌ಗಳನ್ನು ನಿರ್ಮಿಸಿ ಕುಡಿಯುವ ನೀರು, ಮಜ್ಜಿಗೆ, ಷರಬತ್ತು, ಕಬ್ಬಿನ ಜ್ಯೂಸ್‌, ಕಿತ್ತಳೆ ಹಣ್ಣು, ಸೇಬು, ಬಾಳೆಹಣ್ಣು, ಕಡಲೆಕಾಯಿ, ಕಡಲೆಪೂರಿ, ಪಾಪ್‌ಕಾರ್ನ್‌ಗಳನ್ನು ಕೊಟ್ಟು ಅಭಿಮಾನಿಗಳು ಹುರಿದುಂಬಿಸಿದರು.

ಪಾದಯಾತ್ರೆ ಮುಂದುವರಿದಂತೆ ತಾಮಸಂದ್ರ ಸರ್ಕಲ್‌ನಲ್ಲಿ ಪುಷ್ಪಾರ್ಚನೆ ಮೂಲಕ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಸೇರಿದಂತೆ ಪಾದಯಾತ್ರಿಗಳಿಗೆ ಅದ್ದೂರಿ ಸ್ವಾಗತ ಕೋರಿದ ಸ್ಥಳೀಯ ಮುಖಂಡರು, ಗ್ರಾಮಸ್ಥರು ಮೇಕೆದಾಟು ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕಾಗಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಾದಯಾತ್ರೆಗೆ ಕನಕಪುರದಲ್ಲಿ ಮಂಗಳವಾರ ಚಾಲನೆ ದೊರೆಯುತ್ತಿದ್ದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ತ್ರಿವರ್ಣದ ಧ್ವಜದೊಂದಿಗೆ ಕನಕಪುರ ಎಂ.ಜಿ.ರಸ್ತೆಯಲ್ಲಿ ಪಾದಯಾತ್ರೆ ನಡೆಸಿ ಜನರ ಗಮನ ಸೆಳೆದರು. ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಾಣಾಳು ತನಕ ಪಾದಯಾತ್ರೆ ನಡೆಸಿದರು.

ಅಪಾಯದ ಸನಿಹಕ್ಕೆ: ಪಾದಯಾತ್ರೆಯಲ್ಲಿ ತೆರಳುವ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಪುಷ್ಪಾರ್ಚನೆ ಮಾಡಬೇಕೆಂಬ ಆಸೆಯಿಂದ ಅಭಿಮಾನಿಗಳು ಜೆಸಿಬಿ ಯಂತ್ರವನ್ನು ಏರಿ ತಮಗೆ ಅರಿವಿಲ್ಲದಂತೆ ಟ್ರಾನ್ಸ್‌ ಫಾರ್ಮರ್‌ ಸಮೀಪದಲ್ಲಿ ನಿಂತು ಪುಷ್ಪಾರ್ಚನೆ ಮಾಡಿದರು.

ವಾಹನಯಾತ್ರೆ: ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಪಾದಯಾತ್ರೆಗೆ ಕರೆದುಕೊಂಡು ಬಂದಿರುವ ಬಸ್ಸು, ಕಾರುಗಳು ಪಾದಯಾತ್ರೆ ಜತೆಯಲ್ಲೇ ಸಾಗುತ್ತಿರುವುದರಿಂದ ವಾಹನಯಾತ್ರೆಯಾಗಿದೆ. ಒಂದು ಕಿಲೋ ಮೀಟರ್‌ವರೆಗೆ ಪಾದಯಾತ್ರಿಕರು ಆವರಿಸಿಕೊಂಡರೆ 4 ಕಿಲೋ ಮೀಟರ್‌ವರೆಗೂ ವಾಹನಗಳು ಪೂರ್ಣ ರಸ್ತೆಯನ್ನು ಆವರಿಸಿಕೊಂಡು ಜತೆಯಲ್ಲೇ ಸಾಗಿದವು. ಸಂಗಮ ರಸ್ತೆಯನ್ನು 2 ದಿನ ಪೂರ್ಣ ಆವರಿಸಿಕೊಂಡ ವಾಹನಗಳು, ಮಂಗಳವಾರ ರಾಮನಗರ ರಸ್ತೆಯನ್ನು ಪೂರ್ಣ ಆವರಿಸಿಕೊಂಡಿದ್ದವು. ರಾಮನಗರಿಂದ ಕನಕಪುರಕ್ಕೆ, ಕನಕಪುರದಿಂದ ರಾಮನಗರಕ್ಕೆ ಹೋಗುವವರಿಗೆ ಪರ್ಯಾಯ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.