ಡಿ.ಕೆ. ಶಿವಕುಮಾರ್
ಕನಕಪುರ (ರಾಮನಗರ): ‘ಇ.ಡಿ, ಐ.ಟಿ ಮತ್ತು ಸಿಬಿಐಗೆ ಹೆದರಿ ಬಿಜೆಪಿಗೆ ಹೋಗುವ ರಕ್ತವಾ ನನ್ನದು? ಕನಕಪುರದವರದ್ದು ಯಾರಿಗೂ ಶರಣಾಗುವ ರಕ್ತವಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
‘ನನ್ನ ವಿರುದ್ಧದ ಜಾರಿ ನಿರ್ದೇಶನಾಲಯ(ಇ.ಡಿ), ತೆರಿಗೆ ಇಲಾಖೆ(ಐ.ಟಿ) ಹಾಗೂ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಪ್ರಕರಣ ಕೈ ಬಿಡುವಂತೆ ನಾನು ಕೇಂದ್ರ ಸಚಿವರಿಗೆ ದುಂಬಾಲು ಬಿದ್ದಿದ್ದೇನೆ. ಬಿಜೆಪಿ ಸೇರಿಕೊಳ್ಳಲಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು. ಯತ್ನಾಳ ಬಾಯಿ ಬಹಳ ಕೆಟ್ಟದ್ದು’ ಎಂದರು.
ಯತ್ನಾಳ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಕನಕಪುರದ ಕೋರ್ಟ್‌ಗೆ ಬುಧವಾರ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನದು ಬಿಜೆಪಿಗೆ ಹೋಗುವ ರಕ್ತವಲ್ಲ. ನಾನೀಗಾಗಲೇ ಏನೇನು ಅನುಭವಿಸಬೇಕೋ ಎಲ್ಲಾ ಅನುಭವಿಸಿ ಆಗಿದೆ’ ಎಂದರು.
‘ನಾನು ಬಿಜೆಪಿ ಸೇರಿಕೊಳ್ಳುವೆ ಎಂದು ಯತ್ನಾಳ ಅಪಪ್ರಚಾರ ಮಾಡಿದ್ದರು.ಹಾಗಾಗಿ, ಅವರ ವಿರುದ್ಧ ₹100 ಕೋಟಿ ಮಾನಹಾನಿ ಮೊಕದ್ದಮೆ ಹಾಕಿ ₹1 ಕೋಟಿ ಕೋರ್ಟ್ ಶುಲ್ಕ ಪಾವತಿಸಿದ್ದೇನೆ’ ಎಂದರು.
‘ಬೆಂಗಳೂರು ಕೋರ್ಟ್‌ಗೆ ಈ ಪ್ರಕರಣ ವರ್ಗಾವಣೆ ಮಾಡುವಂತೆ ಯತ್ನಾಳ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಜಾ ಮಾಡಿದ್ದ ಹೈಕೋರ್ಟ್, ಕನಕಪುರಕ್ಕೆ ಹೋಗಿ ಎಂದು ಸೂಚಿಸಿದೆ. ಇಂದು ವಿಚಾರಣೆ ಇದ್ದಿದ್ದರಿಂದ ಕೋರ್ಟ್‌ಗೆ ಹಾಜರಾಗಿ ದಾಖಲೆ ನೀಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.