ADVERTISEMENT

‘ಜನಪದ ಸಂಸ್ಕೃತಿ ಜೀವಂತವಾಗಿಸಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 6:18 IST
Last Updated 20 ಸೆಪ್ಟೆಂಬರ್ 2021, 6:18 IST
ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಗ್ರಾಮದಲ್ಲಿ ನಡೆದ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಸಿಂ.ಲಿಂ. ನಾಗರಾಜು ಮಾತನಾಡಿದರು. ಎಸ್‌ಡಿಎಂಸಿ ಸಮನ್ವಯ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗವಾರ ಶಂಭುಗೌಡ ಇದ್ದರು
ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಗ್ರಾಮದಲ್ಲಿ ನಡೆದ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಸಿಂ.ಲಿಂ. ನಾಗರಾಜು ಮಾತನಾಡಿದರು. ಎಸ್‌ಡಿಎಂಸಿ ಸಮನ್ವಯ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗವಾರ ಶಂಭುಗೌಡ ಇದ್ದರು   

ಚನ್ನಪಟ್ಟಣ: ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ಜೀವನ ನಾಶ ಮಾಡಿಕೊಳ್ಳುವ ಬದಲು ಯುವಜನತೆ ಗ್ರಾಮೀಣ ಬದುಕಿನ ಜನಪದ ಸೊಗಡು, ಸಂಸ್ಕೃತಿ ಸೊಬಗನ್ನು ಜೀವಂತವಾಗಿರಿಸಲು ಮನಸ್ಸು ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸಿಂ.ಲಿಂ. ನಾಗರಾಜು ಕಿವಿಮಾತು ಹೇಳಿದರು.

ತಾಲ್ಲೂಕಿನ ಮುದಗೆರೆ ಗ್ರಾಮದ ತೋಟದಲ್ಲಿ ಚಕ್ಕೆರೆ ಗ್ರಾಮದ ಹುಚ್ಚಮ್ಮ ಜಾನಪದ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ರೈತಾಪಿ ಜನರು ತಮ್ಮ ಕೃಷಿ ಕೆಲಸಗಳು ಸುಗಮವಾಗಿ ಸಾಗಲೆಂದು ಅನೇಕ ಪದಗಳನ್ನು ತಾವೇ ಸ್ವತಃ ಕಟ್ಟಿ ಹಾಡುತ್ತಿದ್ದರು. ಇಂದು ನಾಗರಿಕತೆ ಬೆಳೆದಂತೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮಂದಿಯೇ ಕಡಿಮೆಯಾಗಿದ್ದಾರೆ. ಅದರೊಟ್ಟಿಗೆ ಕೃಷಿಯ ಆಚರಣೆಗಳು ಕಣ್ಮರೆಯಾಗುತ್ತಿವೆ. ಜನಪದ ಸಂಸ್ಕೃತಿ ಅವನತಿಯ ಹಾದಿಯತ್ತ ಸಾಗುತ್ತಿದೆ. ಹಾಗಾಗಿ, ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಜನಪದ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಎಸ್‌ಡಿಎಂಸಿ ಸಮನ್ವಯ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗವಾರ ಶಂಭುಗೌಡ ಮಾತನಾಡಿ, ಜನಪದ ಹಳ್ಳಿಗರಿಂದಲೇ ಜೀವಂತವಾಗಿದೆ. ಸರ್ಕಾರವು ಜನಪದ ಸಂಸ್ಕೃತಿ ಉಳಿಸಲು ರಾಜ್ಯದೆಲ್ಲೆಡೆ ಕಾರ್ಯಕ್ರಮ ನೀಡಲು ಕಲಾ ಸಂಘಟನೆಗಳಿಗೆ ಇನ್ನಷ್ಟು ಹೆಚ್ಚಿನ ಅನುದಾನ ನೀಡಬೇಕು ಎಂದರು.

ಜಾನಪದ ಜಾತ್ರೆಯಂತಹ ಕಾರ್ಯಕ್ರಮ ಆರಂಭಿಸಬೇಕು. ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಗುರಿ ಯುವ ಸಮುದಾಯದ ಮೇಲಿದೆ ಎಂದು ಹೇಳಿದರು.

ಮುದುಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿದರು. ರಂಗಭೂಮಿ ಕಲಾವಿದ ಬೆಳಕೆರೆ ಕೆಂಪೇಗೌಡ, ಐಟಿಐ ಕಾಲೇಜಿನ ಪ್ರಾಂಶುಪಾಲ ರಮೇಶ್, ರಂಗಭೂಮಿ ಕಲಾವಿದ ದಶವಾರ ಮಹೇಶ್, ಎಸ್‌ಡಿಎಂಸಿ ಸಮನ್ವಯ ಸಮಿತಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ರಮೇಶ್, ಹುಚ್ಚಮ್ಮ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಚಕ್ಕೆರೆ ಸಿದ್ದರಾಜು ಭಾಗವಹಿಸಿದ್ದರು.

ಕಲಾವಿದರಿಂದ ಸೋಬಾನೆ ಗೀತ ಗಾಯನ ನಡೆಸಲಾಯಿತು. ಜನಪದ ಕಲಾವಿದರು ಗೀತ ಗಾಯನ ನಡೆಸಿಕೊಟ್ಟರು. ಜನಪದ ಕಲಾವಿದರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.