ADVERTISEMENT

ಹಾದಿ ತುಂಬ ಗುಂಡಿಗಳದ್ದೇ ಸಾಮ್ರಾಜ್ಯ: ಕೆಂಗಲ್‌–ಕಣ್ವ ರಸ್ತೆ ಅಭಿವೃದ್ಧಿ ಯಾವಾಗ?

ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಮೇ 2019, 12:23 IST
Last Updated 14 ಮೇ 2019, 12:23 IST
ಕೆಂಗಲ್ ನಿಂದ ಕಣ್ವ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು
ಕೆಂಗಲ್ ನಿಂದ ಕಣ್ವ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು   

ರಾಮನಗರ: ಕೆಂಗಲ್ ನಿಂದ ಪ್ರವಾಸಿ ತಾಣವಾದ ಕಣ್ವ ಜಲಾಶಯಕ್ಕೆ ತೆರಳುವ ರಸ್ತೆಯು ಹೆಜ್ಜೆಹೆಜ್ಜೆಗೂ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ದುಸ್ತರವಾಗಿದೆ. ರಸ್ತೆಯ ದುಸ್ಥಿತಿ ಕಣ್ಣಿಗೆ ರಾಚುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ತಮಗರಿಲ್ಲದಂತೆ ವರ್ತಿಸುತ್ತಿರುವುಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಈ ರಸ್ತೆಯ ಮೂಲಕವೇ ಪೌಳಿದೊಡ್ಡಿ, ಕನ್ನಸಂದ್ರ, ದೇವರಹೊಸಹಳ್ಳಿ ವೃತ್ತ, ಎರಡು ಲಂಬಾಣಿ ತಾಂಡ್ಯಗಳಿಗೆ ಹಾಗೂ ಕಣ್ವ ಜಲಾಶಯಕ್ಕೆ ಹೋಗಬೇಕಾಗಿದೆ. ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಇಡೀ ರಸ್ತೆಯ ಉದ್ದಕ್ಕೂ ಗುಂಡಿಗಳು ನಿರ್ಮಾಣವಾಗಿವೆ.

ರಸ್ತೆಗೆ ಹಾಕಿರುವ ಜಲ್ಲಿ, ಡಾಂಬರು ಕಿತ್ತುಬಂದಿದ್ದು, ಇದೇನು ಕಾಡಂಚಿನ ಕುಗ್ರಾಮದ ರಸ್ತೆಯೋ ಎಂಬಂತಿದೆ. ವಾಹನ ದಟ್ಟಣೆ ಇರುವ ಇಂತಹ ಪ್ರಮುಖ ರಸ್ತೆ ಡಾಂಬರು ಕಂಡು ಹಲವು ವರ್ಷಗಳೇ ಕಳೆದಿವೆ. ರಾತ್ರಿ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದೇ ಮನೆ ಸೇರಬೇಕಾದ ಸ್ಥಿತಿ ನಿರ್ವಣವಾಗಿದೆ. ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ಥಿಪಡಿಸಲು ಅಧಿಕಾರಿಗಳು ಮುಂದಾಗಿಲ್ಲ ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು.

ADVERTISEMENT

ಈ ಭಾಗದಿಂದ ಕಚೇರಿಗಳಿಗೆ ಹೋಗುವ ನೌಕರರು, ಶಾಲಾಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು, ಮಾರುಕಟ್ಟೆಗೆ ಹೋಗುವ ರೈತರು, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತೆರಳುವವರು ತೊಂದರೆ ಅನುಭವಿಸುವಂತಾಗಿದೆ ಎಂದು ಕನ್ನಸಂದ್ರದ ಸುರೇಶ್ ಬೇಸರ ವ್ಯಕ್ತಪಡಿಸಿದರು.

ಹಲವು ಬಾರಿ ರಸ್ತೆ ಸರಿಪಡಿಸುವಂತೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಮಸ್ಯೆಗೆ ಸ್ಪಂದಿಸಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಮತ್ತು ಆಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರಸ್ತೆ ಹೆಚ್ಚು ಗುಂಡಿಯಿಂದ ತುಂಬಿದೆ. ವಾಹನ ಚಲಾಯಿಸಲು ಪ್ರಯಾಸ ಪಡಬೇಕಾಗಿದೆ. ಅಲ್ಲದೆ ವಾಹನಗಳ ಬ್ಲೇಡ್ ಮತ್ತಿತರ ಬಿಡಿಭಾಗಗಳಿಗೆ ಹಾನಿಯಾಗುತ್ತಿದೆ. ನಿತ್ಯವೂ ರಿಪೇರಿಗೆ ಬರುವುದರಿಂದ ಖರ್ಚು ಅಧಿಕವಾಗುತ್ತಿದೆ. ವಾಹನ ಸಾಲದ ಕಂತು ಕಟ್ಟಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಬೈಕ್ ಸವಾರ ಸತೀಶ್ ತಿಳಿಸಿದರು.

ಪ್ರವಾಸಿಗರ ಬೇಸರ: ಕಣ್ವ ನದಿ ಮತ್ತು ಸೀತನ ತೊರೆಗಳಿಂದ ಕಣ್ವ ಜಲಾಶಯವನ್ನು ನಿರ್ಮಿಸಲಾಗಿದೆ. ಸುತ್ತಮುತ್ತ ಬೆಟ್ಟಗುಡ್ಡಗಳಿದ್ದು, ಸುಂದರ ಪಕೃತಿಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ರಾಜ್ಯದ ಪ್ರಪ್ರಥಮ ಸೈಫನ್ ತಾಂತ್ರಿಕತೆ ಉಪಯೋಗಿಸಲಾಗಿದ್ದು, ಈಗ ಕ್ರೆಸ್ಟ್ ಗೇಟ್ ಅಳವಡಿಸಲಾಗಿದೆ. ಆದರೆ ಜಲಾಶಯವನ್ನು ನೋಡಲು ಬರುವ ಪ್ರವಾಸಿಗರು ಹದಗೆಟ್ಟಿರುವ ರಸ್ತೆಯಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಣ್ವ ಜಲಾಶಯ ಉತ್ತಮ ಪ್ರವಾಸಿ ತಾಣವಾಗಿದೆ. ಆದರೆ ಇಲ್ಲಿಗೆ ಬರಲು ಸರಿಯಾದ ರಸ್ತೆ ಇಲ್ಲ. ಮೂಲ ಸೌಕರ್ಯಗಳಿಲ್ಲ. ಕೆಂಗಲ್ ನಿಂದ ಕಣ್ವ ಜಲಾಶಯಕ್ಕೆ ಬರುವಷ್ಟರಲ್ಲಿ ಸಾಕಾಗಿ ಹೋಯಿತು ಎಂದು ಪ್ರವಾಸಿಗ ಚಂದನ್ ತಿಳಿಸಿದರು.

ಕಣ್ವ- ಕೆಂಗಲ್ ರಸ್ತೆಯಲ್ಲಿನ ಕನ್ನಮಂಗಲ ಗ್ರಾಮದ ಬಳಿ ಕೆಎಂಎಫ್ ವತಿಯಿಂದ ಹಾಲಿನ ಪೌಡರ್ ತಯಾರಿಸುವ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಇನ್ನು ಮುಂದಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಜನರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖಂಡ ರಾಮಕೃಷ್ಣ ತಿಳಿಸಿದರು.

*ಕಣ್ವ ಜಲಾಶಯ ಇದೇ ದಾರಿಯಲ್ಲಿ ಇದ್ದು, ಇದೀಗ ಕೆಎಂಎಫ್‌ ಹಾಲಿನ ಪುಡಿ ಘಟಕವೂ ನಿರ್ಮಾಣ ಆಗುತ್ತಿದೆ. ಈ ರಸ್ತೆ ಅಭಿವೃದ್ಧಿಯಾದರೆ ಎಲ್ಲರಿಗೂ ಅನುಕೂಲ ಆಗುತ್ತದೆ
–ರಾಮಕೃಷ್ಣ,ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.