ADVERTISEMENT

ವ್ಯಕ್ತಿ ಅಪಹರಣ: ನಾಲ್ವರ ಬಂಧನ

ಉಳಿದ ಆರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 5:35 IST
Last Updated 1 ನವೆಂಬರ್ 2022, 5:35 IST
ಹಲ್ಲೆಗೊಳಗಾಗಿರುವ ನಾಗರಾಜು 
ಹಲ್ಲೆಗೊಳಗಾಗಿರುವ ನಾಗರಾಜು    

ಕನಕಪುರ: ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ ಹಣ, ಚಿನ್ನದ ಉಂಗುರ ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರು ಆರೋಪಿಗಳ ಪತ್ತೆಗೆ ಶೋಧಮುಂದುವರಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಕಾರು, ದೊಣ್ಣೆ, ಹಗ್ಗ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಶ್ರೀನಿವಾಸ್, ರಾಜಪ್ಪ, ಶಿವಕುಮಾರ್, ಶ್ರೀನಿವಾಸ್ ಅಲಿಯಾಸ್ ನಾಗ ಎಂದು ಗುರುತಿಸಲಾಗಿದೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಶೆಟ್ಟಿಕೆರೆದೊಡ್ಡಿ ಗ್ರಾಮದ ನಾಗರಾಜು ತೀವ್ರ ಗಾಯಗೊಂಡಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಈ ಸಂಬಂಧ ನಾಗರಾಜು ಅವರು ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ಬೆನ್ನು ಹತ್ತಿದ ಕೋಡಿಹಳ್ಳಿ ಪಿಎಸ್ಐ ರವಿಕುಮಾರ್ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಆನೇಕಲ್‌ ರಸ್ತೆಯ ಕಾಡುಜಕ್ಕಸಂದ್ರದ ಪಕ್ಕದಲ್ಲಿ ಆರೋಪಿಗಳ ಪೈಕಿ ಒಬ್ಬನಾದ ಶ್ರೀನಿವಾಸ ಎಂಬಾತನಿಗೆ ಸೇರಿದ ತೋಟದ ಮನೆಯಲ್ಲಿ ನಾಗರಾಜು ಅವರನ್ನು ಕೈಕಾಲು ಕಟ್ಟಿ ಕೂಡಿ ಹಾಕಲಾಗಿತ್ತು. ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ನನಗೆ ಜೀವಭಯವಿದೆ: ಸಂತ್ರಸ್ತ

ಅಕ್ಟೋಬರ್ 26ರಂದು ಕಾರಿನಲ್ಲಿ ಬಂದಿದ್ದ ಶೆಟ್ಟಿಕೆರೆದೊಡ್ಡಿ ಗ್ರಾಮದ ಸುಖಾನಂದ ಮತ್ತು ಪುಟ್ಟೇಗೌಡ ಸೇರಿದಂತೆ ಇತರೆ 9 ಮಂದಿ ಕಾರಿನಲ್ಲಿ ಬಂದು ನನ್ನನ್ನು ಅಪಹರಣ ಮಾಡಿದ್ದರು. ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಕೈಕಾಲು ಕಟ್ಟಿ ಹಾಕಿ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.

ನನ್ನಮೊಬೈಲ್ ಕಿತ್ತುಕೊಂಡು ಅದರ ಮೂಲಕ ಖಾತೆಯಲ್ಲಿದ್ದ ₹99 ಸಾವಿರ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಜತೆಗೆ ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರವನ್ನು ಕಿತ್ತುಕೊಂಡಿದ್ದರು. ಬಳಿಕನನ್ನನ್ನು ದಯಾನಂದ ಸಾಗರ್ ಆಸ್ಪತ್ರೆ ಬಳಿ ಬಿಟ್ಟು ಪರಾರಿಯಾದರು. ಈ ವೇಳೆ ಈ ಕುರಿತು ಪೊಲೀಸರಿಗೆ ದೂರು ನೀಡಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ನನಗೆ ಜೀವಭಯವಿದೆ ಎಂದು ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಸಂತ್ರಸ್ತ ನಾಗರಾಜು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.