ADVERTISEMENT

ಚನ್ನಪಟ್ಟಣ: ಕಿಸಾನ್ ಪ್ರಗತಿ ಕಾರ್ಡ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:05 IST
Last Updated 10 ಜನವರಿ 2020, 13:05 IST
ಚನ್ನಪಟ್ಟಣ ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಕಿಸಾನ್ ಪ್ರಗತಿ ಕಾರ್ಡ್ ಬಿಡುಗಡೆ ಮಾಡಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಕಿಸಾನ್ ಪ್ರಗತಿ ಕಾರ್ಡ್ ಬಿಡುಗಡೆ ಮಾಡಲಾಯಿತು   

ಚನ್ನಪಟ್ಟಣ: ರೈತರಿಗೆ ಸಾಲದ ಅಗತ್ಯತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉಜ್ಜೀವನ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಕಿಸಾನ್ ಪ್ರಗತಿ ಕಾರ್ಡ್ (ಕೆ.ಪಿ.ಸಿ.) ಪರಿಚಯಿಸುತ್ತಿದೆ ಎಂದು ಬ್ಯಾಂಕ್ ನ ಗ್ರಾಮೀಣ ಮುಖ್ಯಸ್ಥ ಮೂರ್ತಿ ತಿಳಿಸಿದರು.

ತಾಲ್ಲೂಕಿನ ಕೃಷ್ಣಾಪುರ ಶಾಖೆಯಲ್ಲಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಕಿಸಾನ್ ಪ್ರಗತಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿ, ಇಂದಿನ ಕೃಷಿ ಕ್ಷೇತ್ರ ಸಂಕಷ್ಟ ಪರಿಸ್ಥಿತಿಯಲ್ಲಿದೆ. ರೈತರಿಗೆ ಸಾಲ ಸೌಲಭ್ಯ ದೊರೆಯುವುದು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಅವರ ಹಣಕಾಸು ಅಗತ್ಯವನ್ನು ಪೂರೈಸಲೆಂದು ಈ ಕಾರ್ಡ್ ಪರಿಚಯಿಸಿದೆ. ರೈತರು ಇದರ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ಈ ಕಾರ್ಡ್ ಮೂಲಕ ರೈತರು ಬೆಳೆ ಉತ್ಪಾದನೆ, ಬಿತ್ತನೆ ಮತ್ತು ಕಟಾವು ಸಂದರ್ಭದಲ್ಲಿ ಎದುರಾಗುವ ಹಣಕಾಸು ಅಗತ್ಯಗಳು, ಕೃಷಿ ಆಸ್ತಿಯನ್ನು ನಿರ್ವಹಣೆ ಮಾಡಲು ದುಡಿಯುವ ಬಂಡವಾಳ ಮತ್ತು ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸಲು ಅಗತ್ಯವಿರುವ ಹಣದ ನೆರವನ್ನು ನೀಡಲಾಗುತ್ತದೆ ಎಂದರು.

ADVERTISEMENT

ಬ್ಯಾಂಕ್ ಗ್ರಾಹಕ ಸುಳ್ಳೇರಿ ರೈತ ಎಸ್.ಕೆ. ಸುನೀಲ್ ಮಾತನಾಡಿ, ‘ನಮ್ಮ ಕುಟುಂಬಕ್ಕೆ ಕೃಷಿಯೇ ಮುಖ್ಯ ಉದ್ಯೋಗವಾದರೂ ಬ್ಯಾಂಕಿನಿಂದ ₹5.4 ಲಕ್ಷ ಸಾಲ ಪಡೆದು ಕೃಷಿ ಜೊತೆಗೆ ರೇಷ್ಮೆ, ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆ. ಈಗ ಆರ್ಥಿಕವಾಗಿ ಸಬಲರಾಗಿ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದ್ದೇನೆ. ಇತರರಿಗೆ ಸಾಲ ಸೌಲಭ್ಯ ದೊರಕಿಸಿಕೊಡಲು ನೆರವಾಗಿದ್ದೇನೆ. ಇದೇ ರೀತಿ ಎಲ್ಲರೂ ಬ್ಯಾಂಕಿನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದರು.

ಬ್ಯಾಂಕಿನ ವ್ಯವಸ್ಥಾಪಕ ರವಿಕುಮಾರ್ ಮಾತನಾಡಿ, ‘ಕೃಷ್ಣಾಪುರ ಗ್ರಾಮದಲ್ಲಿ ಶಾಖೆ ಪ್ರಾರಂಭವಾಗಿ ನಾಲ್ಕ ವರ್ಷ ಪೂರೈಸಿದೆ. ಎರಡು ಸಾವಿರ ಗ್ರಾಹಕರನ್ನು ಹೊಂದಿ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದೆ. ಈವರಗೆ ₹6 ಕೋಟಿ ವಹಿವಾಟು ನಡೆಸಿದೆ ಎಂದು ವಿವರಿಸಿದರು.

ಮಾರುಕಟ್ಟೆ ಮುಖ್ಯಸ್ಥರಾದ ಲಕ್ಷ್ಮಣ್, ಹಿರಿಯ ವ್ಯವಸ್ಥಾಪಕ ವೆಂಕಟಾಚಲಯ್ಯ ಮತ್ತು ಬ್ಯಾಂಕ್‌ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.