ADVERTISEMENT

ಚಾಕನಹಳ್ಳಿ: ಕಿಟ್‌ ಹಂಚಿಕೆ ಹೊತ್ತಿಸಿದ ಕಿಚ್ಚು- ಎರಡು ಗುಂಪಿನ ನಡುವೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 3:41 IST
Last Updated 11 ಜೂನ್ 2021, 3:41 IST
ಚಾಕನಹಳ್ಳಿ ಗ್ರಾ.ಪಂ.ನಲ್ಲಿ ರೇಷನ್‌ ಕಿಟ್‌ ವಿತರಣೆ ಮಾಡುವ ವಿಚಾರವಾಗಿ ಎರಡು ಗುಂಪಿನ ಮುಖಂಡರ ನಡುವೆ ಜಗಳ ನಡೆಯಿತು
ಚಾಕನಹಳ್ಳಿ ಗ್ರಾ.ಪಂ.ನಲ್ಲಿ ರೇಷನ್‌ ಕಿಟ್‌ ವಿತರಣೆ ಮಾಡುವ ವಿಚಾರವಾಗಿ ಎರಡು ಗುಂಪಿನ ಮುಖಂಡರ ನಡುವೆ ಜಗಳ ನಡೆಯಿತು   

ಕನಕಪುರ: ಗ್ರಾಮ ಪಂಚಾಯಿತಿಯಿಂದ ಉಚಿತವಾಗಿ ಹಂಚಿಕೆ ಮಾಡುವ ದಿನಸಿ ಕಿಟ್‌ ವಿತರಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿ ಗುಂಪಿನ ನಡುವೆ ಜಗಳವಾಗಿ ಕೈಕೈ ಮಿಲಾಯಿಸಿದ ಘಟನೆ ತಾಲ್ಲೂಕಿನ ಚಾಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದಿದೆ.

ಚಾಕನಹಳ್ಳಿ ಪಂಚಾಯಿತಿ ಆವರಣದಲ್ಲಿ ಸಾರ್ವಜನಿಕವಾಗಿ ದಿನಸಿ ಕಿಟ್‌ ಹಂಚಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಸದ ಡಿ.ಕೆ. ಸುರೇಶ್‌ ಅವರು ಸಾಂಕೇತಿಕವಾಗಿ ಹಂಚಿಕೆ ಮಾಡಿದರು. ಉಳಿದವುಗಳನ್ನು ಆಯಾ ಗ್ರಾಮದ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಹಂಚಿಕೆ ಮಾಡಲು ತಿಳಿಸಿ ಹೊರಟು ಹೋದರು.

ಸಂಸದರು ಹೋದ ಮೇಲೆ ಪಂಚಾಯಿತಿ ಕಚೇರಿಯೊಳಗೆ ಅಧ್ಯಕ್ಷ ಗಂಗಾರಾಜ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಿಟ್‌ ವಿತರಣೆ ಮಾಡಲು ಆಯಾ ಗ್ರಾಮದ ಸದಸ್ಯರು, ಪಕ್ಷದ ಮುಖಂಡರು ಹಾಗೂ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಸಭೆಯಲ್ಲಿ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸುತ್ತಿದ್ದಾಗ ಚೀರಣಕುಪ್ಪೆ ಗ್ರಾಮದ ದಿನಸಿ ಕಿಟ್‌ ಹಂಚುವ ವಿಚಾರ ಘರ್ಷಣೆಗೆ ಕಾರಣವಾಯಿತು. ‘ಬೇರೆ ಗ್ರಾಮಗಳಿಗೆ ಇಂದು ರೇಷನ್‌ ಕಿಟ್‌ ಕೊಡಿ. ಚೀರಣಕುಪ್ಪೆ ಗ್ರಾಮದ ಕಿಟ್‌ ಅನ್ನು ನಾಳೆ ಬೆಳಿಗ್ಗೆ 6 ಗಂಟೆಗೆ ನಾನು ಬರುತ್ತೇನೆ. ಆ ನಂತರ ಕೊಡಬೇಕು’ ಎಂದು ಚುನಾವಣೆಯಲ್ಲಿ ಸೋತಿದ್ದ ಮಹೇಶ್‌ (ಐನೋರು) ತಿಳಿಸಿದರು. ಇದಕ್ಕೆ ಗೆದ್ದಿದ್ದ ಸದಸ್ಯರ ಕಡೆಯವರು ವಿರೋಧ ವ್ಯಕ್ತಪಡಿಸಿದರು.

ಇದಕ್ಕೆ ನಾವು ಒಪ್ಪುವುದಿಲ್ಲ. ಸಂಸದರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಿಟ್‌ ಹಂಚುವಂತೆ ಹೇಳಿದ್ದಾರೆ. ಆದರೆ, ಬೇರೆ ಗ್ರಾಮಗಳಿಗೆ ಇಂದು ಕೊಟ್ಟು, ನಾಳೆ ಬನ್ನಿ ಎನ್ನುವುದಕ್ಕೆ ಇವರ‍್ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಎರಡು ಗುಂಪಿನವರ ನಡುವೆ ಗದ್ದಲ ಏರ್ಪಟ್ಟಿತು.

ಅಂತಿಮವಾಗಿ ಪಂಚಾಯಿತಿ ಅಧ್ಯಕ್ಷ ಗಂಗರಾಜು ಮತ್ತು ಪಿಡಿಒ ಫಕೀರಪ್ಪ ಮಧ್ಯ ಪ್ರವೇಶಿಸಿ ಎರಡು ಗುಂಪಿನವರನ್ನು ಸಮಾಧಾನಪಡಿಸಿದರು. ಗಲಾಟೆ ವೇಳೆ ಪಂಚಾಯಿತಿಯ ಸ್ವಿಚ್‌ ಬೋರ್ಡ್‌ ಅನ್ನು ನಾಶಪಡಿಸಲಾಗಿದೆ.

ಕೊರೊನಾ ಪಾಸಿಟಿವ್‌: ಚಾಕನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಫಕೀರಪ್ಪ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಅವರಿಗೆ ಮೂರು ದಿನಗಳ ಹಿಂದೆ ಸೋಂಕಿನ ಲಕ್ಷಣಗಳಿದ್ದು,ಕೋವಿಡ್‌ ಟೆಸ್ಟ್‌ ಮಾಡಿಸಿದ್ದರು. ಪಂಚಾಯಿತಿಯಲ್ಲಿ ರೇಷನ್‌ ಕಿಟ್‌ ವಿತರಣೆ ಕಾರ್ಯಕ್ರಮ ಇದ್ದುದರಿಂದ ಕ್ವಾರಂಟೈನ್‌ ಆಗದೆ ಬುಧವಾರ ಸಂಸದರು ನಡೆಸಿಕೊಟ್ಟ ರೇಷನ್‌ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಂಚಾಯಿತಿಯಲ್ಲಿ ನಡೆದ ಗಲಾಟೆ ಸಂದರ್ಭದಲ್ಲೂ ಎಲ್ಲರ ನಡುವೆ ಇದ್ದು ಜಗಳವನ್ನು ಬಿಡಿಸಿದ್ದಾರೆ. ಇದು ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.