ADVERTISEMENT

ಕೆಆರ್‌ಐಡಿಎಲ್: ಏಕರೂಪದ ಮೊತ್ತಕ್ಕೆ ಸಚಿವ ತರಾಟೆ

ಕೆಡಿಪಿ ಸಭೆ: ನಿಗಮದ ಅಧಿಕಾರಿಗೆ ನೋಟಿಸ್ ನೀಡಲು ಸಚಿವ ರಾಮಲಿಂಗಾ ರೆಡ್ಡಿ ಸೂಚನೆ: ಸಭೆಗೆ ಗೈರಾದವರ ಬಗ್ಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 2:32 IST
Last Updated 22 ನವೆಂಬರ್ 2025, 2:32 IST
   

ರಾಮನಗರ:‌ ‘ಏಯ್, ಏನ್ ತಮಾಷೆ ಮಾಡ್ತಿದ್ದಿಯಾ? ಶಾಸಕರು ಪತ್ರ ಕೊಟ್ಟರೆ, ಕಾಮಗಾರಿಗೆ ತಗುಲುವ ವೆಚ್ಚವನ್ನು ಸರಿಯಾಗಿ ಅಂದಾಜಿಸದೆ ಎಲ್ಲದಕ್ಕೂ ಒಂದೇ ರೀತಿಯ ಮೊತ್ತ ಹಾಕುತ್ತೀಯಾ? ಅದಕ್ಕೇನು ಲೆಕ್ಕಾಚಾರವಿಲ್ಲವೆ? ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರೇ ಇವನಿಗೆ ನೋಟಿಸ್ ಕೊಡಿ ...’

– ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ (ಮುಂದುವರಿದ) ಸಭೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಎಂಜಿನಿಯರ್‌ ಅನ್ನು ಜಿಲ್ಲಾ ಉಸ್ತುವಾರಿ ರಾಮಲಿಂಗಾ ರೆಡ್ಡಿ ತರಾಟೆಗೆ ತೆಗೆದುಕೊಂಡ ರೀತಿ ಇದು.

ಕಳೆದ ಎರಡೂವರೆ ವರ್ಷದಲ್ಲಿ ಮೊದಲ ಬಾರಿಗೆ ಸಚಿವರು, ಅಧಿಕಾರಿಯೊಬ್ಬರಿಗೆ ಏಕವಚನ ಬಳಸಿ ತರಾಟೆಗೆ ತೆಗೆದುಕೊಂಡ ಘಟನೆಗೆ ಸಭೆ ಸಾಕ್ಷಿಯಾಯಿತು. ನಿಗಮದ ಸರದಿ ಬಂದಾಗ, ಪ್ರಗತಿ ವರದಿ ಮೇಲೆ ಕಣ್ಣಾಡಿಸಿದ ಸಚಿವರು, ಜಿಲ್ಲೆಯಾದ್ಯಂತ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಲೆಕ್ಕ ಶೀರ್ಷಿಕೆಯಲ್ಲಿ ಏಕೂಪದ ಮೊತ್ತ ಕಂಡು ಹೌಹಾರಿದರು.

ADVERTISEMENT

‘ಹಳ್ಳಿ, ಪಟ್ಟಣ, ನಗರ ವ್ಯಾಪ್ತಿಯಲ್ಲಿ ಬೇರೆ ಬೇರೆ ಕಡೆ ನಡೆದಿರುವ ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಮೊತ್ತದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದನ್ನೆಲ್ಲಾ ನಾನು ಒಪ್ಪುವುದಿಲ್ಲ. ಇದು ಪುನರಾವರ್ತನೆಯಾಗಬಾರದು. ಇದು ನಿನಗೆ ಕೊನೆಯ ಎಚ್ಚರಿಕೆ. ಸರಿಯಾಗಿ ಕೆಲಸ ಮಾಡು’ ಎಂದು ಎಚ್ಚರಿಕೆ ನೀಡಿದರು.

ಆಗ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ‘ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ. ಕಾಮಗಾರಿಗಾಗಿ ನಾವು ಕೊಡುವ ಲೆಟರ್ ಆಧರಿಸಿ ಅವರು ಮೊತ್ತ ಹಾಕಿದ್ದಾರೆ’ ಎಂದು ಸಮರ್ಥಿಸಿಕೊಂಡರು. ಅದಕ್ಕೆ ಸಚಿವರು, ‘ಕಾಮಗಾರಿಗೆ ಎಷ್ಟು ವೆಚ್ಚವಾಗುತ್ತದೊ ಅಷ್ಟು ಮೊತ್ತ ನಮೂದಿಸಬೇಕು. ಹೀಗೆ ಒಂದೇ ರೀತಿ ಹಾಕಿದರೆ ಏನರ್ಥ. ಇದು ಸರಿಯಲ್ಲ’ ಎಂದರು.

ಅಪೂರ್ಣಕ್ಕೆ ಅಸಮಾಧಾನ: ಬಸವ ವಸತಿ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಯಡಿ ಜಿಲ್ಲೆಗೆ 11,734 ಮನೆಗಳು ಮಂಜೂರಾಗಿವೆ. ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಶೇ 100ರಷ್ಟು ಗುರಿ ತಲುಪಲಿದ್ದೇವೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ (ಸಿಪಿಒ) ಚಿಕ್ಕಸುಬ್ಬಯ್ಯ ಸಭೆ ಗಮನಕ್ಕೆ ತಂದರು.

ಗುರಿ ಪೈಕಿ ಇನ್ನೂ 2,594 ಮನೆಗಳಿಗೆ ಗ್ರಾ.ಪಂ. ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸದಿರುವುದಕ್ಕೆ ಸಚಿವರು ಹಾಗೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಪೂರಕವಾಗಿ ದನಿ ಎತ್ತಿದ ಕೆಡಿಸಿ ಸದಸ್ಯರು, ‘ಮನೆಗಳ ಜಿಪಿಎಸ್ ಇನ್ನೂ ಪೂರ್ಣಗೊಂಡಿಲ್ಲ. ಎರಡನೇ ಹಂತದ ಬಿಲ್‌ಗೆ ಫಲಾನುಭವಿಗಳು ಪಂಚಾಯಿತಿಗೆ ಅಲೆಯುತ್ತಿದ್ದಾರೆ’ ಎಂದು ದೂರಿದರು.

ಅದಕ್ಕೆ ಸಚಿವರು, ‘ಇದಕ್ಕೆಲ್ಲಾ ತಾ.ಪಂ. ಇಒಗಳೇ ಹೊಣೆ. ಅವರ ನಿರ್ಲಕ್ಷ್ಯಕ್ಕೆ ನೋಟಿಸ್ ಕೊಡಿ’ ಎಂದು ಜಿ.ಪಂ. ಸಿಇಒಗೆ ಸೂಚಿಸಿದರು. ‘ಡಿ. 31ರೊಳಗೆ ಫಲಾನುಭವಿಗಳನ್ನು ಗುರುತಿಸಿ ಅದರ ಪಟ್ಟಿಯನ್ನು ಕೊಡಬೇಕು. ಗ್ರಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅವರ ವಿರುದ್ದವೂ ಕ್ರಮ ಕೈಗೊಳ್ಳಿ’ ಎಂದು ನಿರ್ದೇಶನ ನೀಡಿದರು.

ಜನಪ್ರತಿನಿಧಿಗಳು, ಅಧಿಕಾರಿಗಳು ಗೈರು: ಸಭೆಗೆ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರಷ್ಟೇ ಇದ್ದರು. ಉಳಿದಂತೆ ಕನಕಪುರ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ್, ರಾಮನಗರದ ಎಚ್.ಎ. ಇಕ್ಬಾಲ್ ಹುಸೇನ್, ನೆಲಮಂಗಲದ ಎನ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಸುಧಾಮ್ ದಾಸ್, ಪುಟ್ಟಣ್ಣ, ರಾಮೋಜಿ ಗೌಡ ಸೇರಿದಂತೆ ಹಲವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಅಧಿಕಾರಿಗಳ ಪೈಕಿ ಬೆಸ್ಕಾಂ ಇಇ, ಲೋಕೋಪಯೋಗಿ ಇಲಾಖೆ ಇಇ, ಆರ್‌ಟಿಒ ಸೇರಿದಂತೆ ಹಲವು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಅದಕ್ಕೆ ಅಸಮಾಧಾನಗೊಂಡ ಸಚಿವರು, ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿ.ಪಂ. ಸಿಇಒ ಮತ್ತು ಡಿ.ಸಿಗೆ ಸೂಚಿಸಿದರು.

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಗಂಗಾಧರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ತಹಶೀಲ್ದಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.