ADVERTISEMENT

ಮಾಗಡಿ| ಕೆ-ಶಿಫ್ ನಾಲ್ಕು ಪಥದ ರಸ್ತೆ ಕಾಮಗಾರಿ: ದೂಳಿಗೆ ಸಾರ್ವಜನಿಕರು ಹೈರಾಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 3:49 IST
Last Updated 15 ನವೆಂಬರ್ 2025, 3:49 IST
ಮಾಗಡಿ ಮುಖ್ಯ ರಸ್ತೆಯಲ್ಲಿ ಯುಜಿಡಿ ಕಾಮಗಾರಿಯಿಂದ ದೂಳು ಆವರಿಸಿರುವುದು  
ಮಾಗಡಿ ಮುಖ್ಯ ರಸ್ತೆಯಲ್ಲಿ ಯುಜಿಡಿ ಕಾಮಗಾರಿಯಿಂದ ದೂಳು ಆವರಿಸಿರುವುದು     

ಮಾಗಡಿ: ಕೆ-ಶಿಫ್ ವತಿಯಿಂದ ನಡೆಯುತ್ತಿರುವ ನಾಲ್ಕು ಪಥದ ರಸ್ತೆ ಕಾಮಗಾರಿ ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮಾಗಡಿ-ಬೆಂಗಳೂರು ಮುಖ್ಯ ರಸ್ತೆ ಕಾಮಗಾರಿ ಸರಿಯಾಗಿ ಮುಂದುವರಿಯದ ಕಾರಣ ಈಗ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ದೂಳಿನ ಸಮಸ್ಯೆ ತಲೆದೋರಿದೆ. ಇದರಿಂದ ಸಾರ್ವಜನಿಕರು ಬೇಸರಗೊಂಡಿದ್ದಾರೆ.

ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಯಿಂದ ಹೊಸ ಒಳಚರಂಡಿ ಕಾಮಗಾರಿ ಆರಂಭವಾಗಿದೆ. ಇದರಿಂದ ಟನ್ ಗಟ್ಟಲೇ ಮಣ್ಣು ಅಗೆಯಲಾಗಿದೆ. ರಸ್ತೆಬದಿ ಬೆಟ್ಟದ ರಾಶಿಯಂತೆ ಮಣ್ಣು ಹಾಕಲಾಗಿದೆ. ಕಾಮಗಾರಿ ಪ್ರದೇಶದಲ್ಲಿ ಸರಿಯಾಗಿ ನೀರು ಚೆಲ್ಲುವ ಕ್ರಮ ಕೈಗೊಂಡಿಲ್ಲ. ಇದರಿಂದ ದೂಳು ಹೆಚ್ಚಾಗಿದೆ. ಇದರಿಂದ ದ್ವಿಚಕ್ರ ವಾಹನ ಚಾಲಕರು, ಪಾದಚಾರಿಗಳು ಮತ್ತು ರಸ್ತೆ ಅಂಗಡಿ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ.

ಕಾಮಗಾರಿ ಸ್ಥಳದಲ್ಲಿ ಮುನ್ನೆಚ್ಚರಿಕೆ ಫಲಕ ಇಲ್ಲದಿರುವುದು ಮತ್ತೊಂದು ತೊಂದರೆ. ರಾತ್ರಿ ಸಮಯದಲ್ಲಿ ಹಾಸನ, ಮಂಗಳೂರು, ಮೈಸೂರು ಮತ್ತು ಕುಣಿಗಲ್ ದಿಕ್ಕಿನಿಂದ ಬರುವ ದೊಡ್ಡ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಾಮಗಾರಿ ಸ್ಥಳದಲ್ಲಿ ರೇಡಿಯಂ ಸ್ಟಿಕರ್ ಅಂಟಿಸಿಲ್ಲ. ರಾತ್ರಿಯಲ್ಲಿ ಮಣ್ಣಿನ ರಾಶಿಗಳು ಕಾಣದೆ ಅಪಘಾತಗಳ ಸಾಧ್ಯತೆಯೂ ಹೆಚ್ಚಿದೆ.

ADVERTISEMENT

ಸೋಮೇಶ್ವರ ಕಾಲೊನಿಯಿಂದ ಹೊಸಪೇಟೆ ವೃತ್ತದವರೆಗಿನ ಎರಡು ಕಿಲೋಮೀಟರ್ ಪ್ರದೇಶ ನರಕವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಲ್ಯಾಗೇಟ್ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ಮಣ್ಣಿನ ರಾಶಿ ಹಾಕಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೆಚ್ಚಿನ ದೂಳಿನಿಂದಾಗಿ ಗಂಟಲು ನೋವು ಮತ್ತು ಅಸ್ತಮಾ ಸಮಸ್ಯೆಯಿಂದ ಜನರು ನರಳುವಂತಾಗಿದೆ. 

ಪಟ್ಟಣದ ನಾಗರಿಕರು ಕೆ-ಶಿಫ್ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಮೂರು ಸಮಯದಲ್ಲೂ ಟ್ಯಾಂಕರ್ ಮೂಲಕ ನೀರು ಹಾಕಿ ದೂಳು ನಿಯಂತ್ರಿಸಬೇಕು ಮತ್ತು ಮುನ್ನೆಚ್ಚರಿಕೆ ಫಲಕ ಹಾಕಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಮಾಗಡಿ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ದೊಡ್ಡ ಮಣ್ಣಿನ ರಾಶಿ 
ಯುಜಿಡಿ ಕಾಮಗಾರಿ ನಡೆಯುತ್ತಿರುವುದು
ರಸ್ತೆಗೆ ನೀರು ಹಾಕಿ ದೂಳು ಹರಡದಂತೆ ‌ಗುತ್ತಿಗೆದಾರರು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಗುತ್ತಿಗೆದಾರರ ವಿರುದ್ಧ ಮೇಲಧಿಕಾರಿಗೆ ದೂರು ನೀಡಲಾಗುವುದು
ಕರಡಿ ನಾಗರಾಜು ಪಟ್ಟಣದ ನಿವಾಸಿ
ಸಾರ್ವಜನಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲವಾದರೆ ಪಟ್ಟಣದ ಜನರು ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ
ವೆಂಕಟಾಚಲಪತಿ ಅಂಗಡಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.