
ರಾಮನಗರ: ‘ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ತತ್ವವನ್ನು ಸಾರಿದ ಜಗತ್ತಿನ ಶ್ರೇಷ್ಠ ಕವಿ. ತಮ್ಮ ಸಾಹಿತ್ಯದ ಮೂಲಕ ಕುವೆಂಪು ಅವರು ಸಾರಿದ ವೈಚಾರಿಕ ಪ್ರಜ್ಞೆ ಹಾಗೂ ಅವರ ಸಾಹಿತ್ಯದುದ್ದಕ್ಕೂ ಇರುವ ಪ್ರಕೃತಿ ಪ್ರೇಮವು ಸಮಾಜಕ್ಕೆ ಮಾರ್ಗದರ್ಶಿಯಾಗಿವೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
ನಗರದ ಐಜೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಉದ್ಯಾನದಲ್ಲಿ ಕುವೆಂಪು ಬಳಗ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುವೆಂಪು ಅವರು ಸಾಹಿತ್ಯದ ಮೂಲಕ ಮೂಢನಂಬಿಕೆ ಹಾಗೂ ಕಂದಾಚಾರ ತೊಡೆದು ಹಾಕಲು ಶ್ರಮಿಸಿದರು’ ಎಂದರು.
‘ನಾಡಗೀತೆ ಹಾಗೂ ರೈತಗೀತೆಯನ್ನು ಬರೆದಿರುವ ಕುವೆಂಪು ಅವರು ಈ ನಾಡಿಗೆ ನೀಡಿರುವ ಕೊಡುಗೆ ಮಹತ್ತರವಾದುದು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಗ್ಗಳಿಕೆ ಅವರದು. ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯದಲ್ಲಿ ಛಾಪು ಮೂಡಿಸಿರುವ ಕುವೆಂಪು ಅವರ ಸಾಹಿತ್ಯವನ್ನು ಯುವಜನರು ಓದಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಮಾತನಾಡಿ, ‘ಮಲೆನಾಡಿನ ಕುಪ್ಪಳಿ ಗ್ರಾಮದಲ್ಲಿ ಜನಿಸಿದ ಕೆ.ವಿ. ಪುಟ್ಟಪ್ಪ ಅವರು ತಮ್ಮ ಸಾಹಿತ್ಯ ಕೃಷಿ ಮೂಲಕ ಮುಂದೆ ಕುವೆಂಪು ಕಾವ್ಯನಾಮದಿಂದ ಪ್ರಖ್ಯಾತರಾದರು. ತಮ್ಮ ಬರವಣಿಗೆ ಮೂಲಕ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದರು’ ಎಂದು ಹೇಳಿದರು.
ಉದ್ಯಾನಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವಂತೆ ಸ್ಥಳೀಯ ನಗರಸಭೆ ಸದಸ್ಯ ಮಂಜುನಾಥ್ ಅವರು, ಶಶಿ ಅವರಿಗೆ ಮನವಿ ಮಾಡಿದರು. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಷಯ ಮಂಡಿಸಿ ಅನುಮತಿ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಶಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ. ನಾಗರಾಜು, ಮುಖಂಡರಾದ ಶ್ರೀಧರ್ ಪ್ರಸಾದ್, ಪಾಂಡು, ನರಸಿಂಹಯ್ಯ, ಸಿದ್ದಪ್ಪಾಜಿ, ಮಲ್ಲಾರಾಧ್ಯ ಅರಸ್, ಹನುಮೇಗೌಡ, ಶಿವಲಿಂಗಯ್ಯ, ಮಂಜುನಾಥ್, ಬಿ.ಜಿ. ಪುಟ್ಟಸ್ವಾಮಯ್ಯ ಹಾಗೂ ಅಪ್ಪಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.