ADVERTISEMENT

ರಾಮನಗರ | ಗೊಡ್ಡು ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟ ಕುವೆಂಪು: ಡಾ.ಯು.ಎಂ. ರವಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 2:30 IST
Last Updated 30 ಡಿಸೆಂಬರ್ 2025, 2:30 IST
ರಾಮನಗರದ ಕಂದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು. ಜಾನಪದ ವಿದ್ವಾಂಸ ಡಾ. ಯು.ಎಂ. ರವಿ, ಜಿಲ್ಲಾ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಸ್ತುವಾರಿ ಅಧಿಕಾರಿ ಪ್ರೊ.ದೀಪಕ್ ಹಾಜರಿದ್ದರು
ರಾಮನಗರದ ಕಂದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು. ಜಾನಪದ ವಿದ್ವಾಂಸ ಡಾ. ಯು.ಎಂ. ರವಿ, ಜಿಲ್ಲಾ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಸ್ತುವಾರಿ ಅಧಿಕಾರಿ ಪ್ರೊ.ದೀಪಕ್ ಹಾಜರಿದ್ದರು   

ರಾಮನಗರ: ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟ ರಾಷ್ಟ್ರಕವಿ ಕುವೆಂಪು ಅವರು ವಿಚಾರ ಕ್ರಾಂತಿಯ ಮೂಲಕ ವಿಜ್ಞಾನವನ್ನು ಮೇಳೈಸಿದವರು ಎಂದು ಜಾನಪದ ವಿದ್ವಾಂಸ ಡಾ.ಯು.ಎಂ. ರವಿ ಅಭಿಪ್ರಾಯಪಟ್ಟರು.

ಕಂದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಅವರ ವಿಚಾರಕ್ರಾಂತಿ ಬುದ್ಧ, ಬಸವಾದಿ ಶರಣರ ತತ್ವವನ್ನು ಒಳಗೊಂಡಿದೆ. ಬಹುಮುಖ ವ್ಯಕ್ತಿತ್ವದ ಲೇಖಕರಾಗಿ ರೈತ, ಕಾರ್ಮಿಕರ ಆಶಯಗಳಿಗೆ ಪ್ರೇರಣೆ ನೀಡುವ ವಿಚಾರ ಅವರ ಸಾಹಿತ್ಯದಲ್ಲಿದೆ. ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಜಾತಿ, ಮತ, ಪಂಥಗಳಿಂದ ದೂರವಿದ್ದು ವಿಶ್ವಪಥಕ್ಕೆ ಆಹ್ವಾನ ನೀಡಿದವರು ಎಂದರು.

ADVERTISEMENT

ವೈದಿಕ ಪರಂಪರೆಯಿಂದ ಹೊರ ಬರುವಂತೆ ಜನಸಾಮಾನ್ಯರಿಗೆ ತಮ್ಮ ವಿಚಾರ ಸಾಹಿತ್ಯ, ಕವಿತೆಗಳು ಮತ್ತು ಕೃತಿ, ನಾಟಕಗಳ ಮೂಲಕ ಪ್ರೇರೇಪಿಸಿದರು. ಶಿಕ್ಷಣದಿಂದ ಜಾತ್ಯತೀತ ಮನೋಭಾವನೆ ಬೆಳೆಸಿಕೊಂಡು ವಿಶ್ವಮಾನವನಾಗಬೇಕು ಎಂಬುದು ಕುವೆಂಪು ಅವರ ಆಶಯವಾಗಿದೆ ಎಂದರು.

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಪಂಚ ತತ್ವಗಳನ್ನು ಬೋಧಿಸಿ, ವರ್ಣಾಶ್ರಮ ನಾಶವಾಗಬೇಕು. ಮತ ಮನುಜಮತ ಆಗಬೇಕು. ಪಥ ವಿಶ್ವಪಥವಾಗಬೇಕು. ಮನಷ್ಯ ವಿಶ್ವ ಮಾನವನಾಗಬೇಕು ಎಂದು ಲೋಕಕ್ಕೆ ಸಾರಿದವರು. ಅವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಲಾವಿದ ಶ್ರೀನಿವಾಸ್ ನಾಡಗೀತೆ, ರೈತಗೀತೆ ಹಾಡಿದರು.

ಜಿಲ್ಲಾ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಸ್ತುವಾರಿ ಅಧಿಕಾರಿ ಪ್ರೊ.ದೀಪಕ್, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.