
ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ಪಿ. ದೊಡ್ಡಿಯ ಕೆ.ವಿ. ಪ್ರಕಾಶ್ ಆಯ್ಕೆಯಾದರು. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಪಂಚಾಯಿತಿ ಸಂಘದ ಕಚೇರಿಯಲ್ಲಿ ಚುನಾಣೆಯಿತು ನಡೆಯಿತು.
ಜೆಡಿಎಸ್ ಬೆಂಬಲಿತ ಕೆ.ವಿ. ಪ್ರಕಾಶ್ ಮತ್ತು ಪುಟ್ಟಸ್ವಾಮಿ, ಕಾಂಗ್ರೆಸ್ ಬೆಂಬಲಿತ ಎಚ್.ಸಿ. ರಾಮಣ್ಣ ನಾಮಪತ್ರ ಸಲ್ಲಿಸಿದ್ದರು. ಪುಟ್ಟಸ್ವಾಮಿ ನಾಮಪತ್ರ ತಿರಸ್ಕೃತವಾದ ಕಾರಣ ಪ್ರಕಾಶ್ ಹಾಗೂ ರಾಮಣ್ಣ ಮಧ್ಯೆ ನೇರ ಸ್ಪರ್ಧೆ ನಡೆಯಿತು.
21 ಸದಸ್ಯ ಬಲದ ಪಂಚಾಯಿತಿಯಲ್ಲಿ 7 ಜೆಡಿಎಸ್ ಮತ್ತು 14 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಚುನಾವಣೆಯಲ್ಲಿ ಪ್ರಕಾಶ್ ಪರವಾಗಿ 11 ಮತ ಮತ್ತು ರಾಮಣ್ಣ ಪರವಾಗಿ 10 ಮತ ಚಲಾವಣೆಯಾದವು. ಅಂತಿಮವಾಗಿ ಪ್ರಕಾಶ್ ಜಯಭೇರಿ ಬಾರಿಸಿದರು. ನಾಲ್ಕೂವರೆ ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳ ಬೆಂಬಲಿಗರು ಪಂಚಾಯಿತಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮ್ಮ ಪಕ್ಷದ ಸದಸ್ಯರು ಅಡ್ಡ ಮತದಾನ ಮಾಡುವ ಅನುಮಾನ ಇದ್ದಿದ್ದರಿಂದ ಎರಡೂ ಪಕ್ಷದವರು ತಮ್ಮ ಸದಸ್ಯರನ್ನು ಬೇರೆ ಕಡೆ ಇಟ್ಟು, ಚುನಾವಣೆ ಸಮಯಕ್ಕೆ ಸರಿಯಾಗಿ ಕರೆ ತಂದಿದ್ದರು.
ಎಲ್ಲರೂ ಸ್ಥಳಕ್ಕೆ ಬಂದಾಗ ಮಾತಿನ ಚಕಮಕಿಯೂ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಒ ಬಿ.ಪಿ. ಕುಮಾರ್ ಕಾರ್ಯನಿರ್ವಹಿಸಿದರು.
ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ನೂತನ ಅಧ್ಯಕ್ಷರನ್ನು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಶಿವರಾಜು, ಲಕ್ಷ್ಮೀಕಾಂತ್, ಎಂ.ಪಿ. ಮಹೇಶ್, ಬಿ. ಉಮೇಶ್, ದೊರೆಸ್ವಾಮಿ, ಕಂಟ್ರಾಕ್ಟರ್ ಪ್ರಕಾಶ್, ಬೈರೇಗೌಡ, ಮಹೇಶ್, ಯಕ್ಷರಾಜು, ನಂಜುಂಡಯ್ಯ, ಕೆಂಪರಾಜು, ಪಾಂಡುರಂಗ, ಅಂಜನಾಪುರ ವಾಸು, ಹೋಟೆಲ್ ಉಮೇಶ್, ಚಂದ್ರಶೇಖರ್, ಜಯಕುಮಾರ್ ಹಾಗೂ ಇತರರು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.