ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಅಂಧರ ಶಾಲೆಯ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರೈತ ನಾಯಕ ಸಿ. ಪುಟ್ಟಸ್ವಾಮಿ ಅವರ ‘ಬೆವರ ಹನಿ’ ಮತ್ತು ‘ದಿಟ್ಟ ನಡೆ ಸ್ಪಷ್ಟ ನುಡಿ’ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ರಾಮನಗರ: ‘ಋಷಿ ಸಂಸ್ಕೃತಿಗೂ ಮುಂಚೆಯೇ ಕೃಷಿ ಸಂಸ್ಕೃತಿ ಇತ್ತು. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಅಭಿವೃದ್ಧಿ ಹೆಸರಿನಲ್ಲಿ ರೈತರು ಭೂಮಿ ಕಳೆದುಕೊಳ್ಳಬಾರದು. ಭೂ ಸ್ವಾಧೀನದ ವಿರುದ್ಧ ನಡೆಯುವ ಹೋರಾಟದಲ್ಲಿ ರೈತರು ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಅರ್ಚಕರಹಳ್ಳಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಅಂಧರ ಶಾಲೆಯ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ಸಮಾನ ಮನಸ್ಕರ ವೇದಿಕೆ, ರೈತ ಬಳಗ ಹಾಗೂ ಮೈಸೂರಿನ ವಿಸ್ಮಯ ಬುಕ್‌ಹೌಸ್ ಮಂಗಳವಾರ ಹಮ್ಮಿಕೊಂಡಿದ್ದ ರೈತ ನಾಯಕ ಸಿ. ಪುಟ್ಟಸ್ವಾಮಿ ಅವರಿಗೆ ‘ರೈತ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ‘ದಿಟ್ಟ ನಡೆ ಸ್ಪಷ್ಟ ನುಡಿ’ ಮತ್ತು ‘ಬೆವರ ಹನಿ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಕೆಐಡಿಬಿಯ ಭೂ ಸ್ವಾಧೀನ ವಿರೋಧಿಸಿ ರೈತ ಸಂಘಟನೆಗಳು ಜೂನ್ 25ರಂದು ಹಮ್ಮಿಕೊಂಡಿರುವ ದೇವನಹಳ್ಳಿ ಚಲೋ ಹೋರಾಟವನ್ನು ಸ್ವಾಮೀಜಿ ಬೆಂಬಲಿಸಬೇಕು’ ಎಂಬ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಸ್ವಾಮೀಜಿ, ‘ಹೋರಾಟದಲ್ಲಿ ರೈತರ ಒಗ್ಗಟ್ಟು ಮುಖ್ಯ. ಇಲ್ಲಿ ಕೊಡುವುದಿಲ್ಲ ಎಂದು ಹೇಳಿ, ಕಡೆಗೆ ಹಣದಾಸೆಗೆ ಜಮೀನು ಬಿಡಬಾರದು. ಮುಂದಿನ ದಿನಗಳು ರೈತರ ಪರವಾಗಿರುವುದರಿಂದ ಜಮೀನು ಉಳಿಸಿಕೊಳ್ಳಬೇಕು’ ಎಂದರು.
‘ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಹೊರವಲಯದ ಜಮೀನುಗಳು ನಗರೀಕರಣಕ್ಕೆ ಆಪೋಶನವಾಗುತ್ತಿವೆ. ಅಭಿವೃದ್ಧಿ ಮತ್ತು ನಗರೀಕರಣದ ವಿಕೇಂದ್ರೀಕರಣಕ್ಕೆ ಸರ್ಕಾರ ಗಮನ ಹರಿಸಬೇಕು. ಕೃಷಿ ಯೋಗ್ಯವಲ್ಲದ ಭೂಮಿ ಇರುವೆಡೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಆಗ ಕೃಷಿಯೂ ಉಳಿಯಲಿದೆ. ನಗರಗಳು ಬೆಳೆಯಲಿವೆ’ ಎಂದ ಹೇಳಿದರು.
ನಿವೃತ್ತ ಲೋಕಾಯಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಮಾತನಾಡಿ, ‘ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ. ಹೋರಾಟಗಾರರಾದ ಪುಟ್ಟಸ್ವಾಮಿ ಅವರು ರೈತಪರ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡು ಬಂದಿದ್ದಾರೆ. ಅವರ ಹೋರಾಟ ಯುವಜನರಿಗೆ ಮಾರ್ಗದರ್ಶನವಾಗಲಿ’ ಎಂದರು.
ಪುಸ್ತಕಗಳನ್ನು ಬಿಡುಗಡೆ ಮಾಡಿದ ಗಣ್ಯರು, ಪುಟ್ಟಸ್ವಾಮಿ ಅವರಿಗೆ ‘ರೈತ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು. ‘ದಿಟ್ಟ ನಡೆ ಸ್ಪಷ್ಟ ನುಡಿ’ ಪುಸ್ತಕ ಕುರಿತು ಹಿರಿಯ ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ಹಾಗೂ ‘ಬೆವರ ಹನಿ’ ಪುಸ್ತಕ ಕುರಿತು ಪ್ರೊ. ಎಚ್. ಕೃಷ್ಣೇಗೌಡ ಮಾತನಾಡಿದರು. ಅನ್ನದಾನೇಶ್ವರನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಮಲ್ಲೇಶ್ ಗುರೂಜಿ, ಶೃತ್ ಅಂಡ್ ಸ್ಮಿತ್ ಫೌಂಡೇಷನ್‌ನ ಎಸ್. ಕರಣ್ ಕುಮಾರ್, ವಿಸ್ಮಯ ಬುಕ್ ಹೌಸ್‌ನ ಪ್ರಕಾಶ್ ಚಿಕ್ಕಪಾಳ್ಯ, ಗೊ.ರಾ. ಶ್ರೀನಿವಾಸ್ ಹಾಗೂ ಇತರರು ಇದ್ದರು.
‘ರೈತರ ಬದುಕು ಕಸಿಯುವ ನಗರೀಕರಣ’
‘ರೈತರ ಬದುಕು ಕಸಿದುಕೊಂಡು ಕೃಷಿ ಭೂಮಿಯನ್ನು ಆಪೋಶನಕ್ಕೆ ತೆಗೆದುಕೊಳ್ಳುವ ನಗರೀಕರಣ ನಿಲ್ಲಬೇಕು. ಇದರ ಅಪಾಯ ಮನಗಂಡಿದ್ದ ಪ್ರೊ.ಎಂ. ನಂಜುಂಡಸ್ವಾಮಿ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಚನೆ ವಿರೋಧಿಸಿ ಬೆಂಗಳೂರು ನಿರ್ವಹಣಾ ಪ್ರಾಧಿಕಾರ (ಬಿಎಂಎ) ರಚಿಸಿ ಎಂದು ಪ್ರತಿಪಾದಿಸಿದ್ದರು. ನನಗೆ ರೈತ ಚಳವಳಿಯ ನಾಯಕರು ಕೊಟ್ಟ ಜ್ಞಾನವನ್ನು ಯಾವ ವಿಶ್ವವಿದ್ಯಾಲಯವೂ ಕೊಟ್ಟಿಲ್ಲ. ನನ್ನಲ್ಲಿ ಇನ್ನೂ ನಾಲ್ಕು ಕೃತಿ ಬರೆಯುವಷ್ಟು ಸರಕಿದೆ. ಆದರೆ ಅದನ್ನು ಓದುವವರು ಇದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ. ಎಲ್ಲರಲ್ಲೂ ಓದು ಕಡಿಮೆಯಾಗಿದೆ’ ಎಂದು ರೈತ ನಾಯಕ ಸಿ. ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದರು.
‘ಗಂಟೆಗೊಬ್ಬ ರೈತ ಆತ್ಮಹತ್ಯೆ’
‘ಎನ್‌ಸಿಆರ್‌ಬಿ ವರದಿ ಪ್ರಕಾರ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಆತ್ಮಹತ್ಯೆ ತಡೆ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯವಿದೆ. ಹೋರಾಟಗಾರರ ಬದುಕು ಹೋರಾಟದ ಜೊತೆಗೇ ಮುಗಿದು ಹೋಗುತ್ತದೆ. ಅದು ದಾಖಲಾಗುವುದು ಕಮ್ಮಿ. ಹೋರಾಟಗಾರರು ಪುಸ್ತಕಕ್ಕಿಂತ ಕರಪತ್ರಗಳನ್ನು ಬರೆಯುವುದೇ ಹೆಚ್ಚು. ಇದನ್ನು ನನ್ನ ತಂದೆಗೂ ಹೇಳುತ್ತಿದ್ದೆ. ಹೋರಾಟದ ಅಗತ್ಯ ಮತ್ತು ಅದರ ಆಶಯಗಳನ್ನು ಮುಂದಿನ ತಲೆಮಾರಿಗೆ ತಿಳಿಸುವಂತಹ ಪುಸಕ್ತಗಳು ಹೊರಬರಬೇಕು. ಈಗಿನ ಹೋರಾಟಗಳು ಹಣ ಮತ್ತು ಅಧಿಕಾರ ಕೇಂದ್ರಿತವೂ ಆಗುತ್ತಿವೆ’ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಒಂದೂವರೆ ವರ್ಷದಲ್ಲಿ ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ. ನೀರಾ ಉತ್ಪಾದನೆ ಮೂಲಕ ರೈತರಿಗೆ ಪರ್ಯಾಯ ಆದಾಯ ಒದಗಿಸಲು ಇರುವ ತೊಡಕುಗಳು ಶೀಘ್ರ ನಿವಾರಣೆಯಾಗಲಿವೆ-ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಶಾಸಕ
ರೈತರ ದನಿಯಾಗಿರುವ ಪುಟ್ಟಸ್ವಾಮಿ ಅವರು ಸೂಪರ್ ಹೀರೊ. ನಿತ್ಯ ಬೆವರು ಹರಿಸಿ ದುಡಿಯುವ ಅನ್ನದಾತರ ಬೆನ್ನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ನಿಲ್ಲಬೇಕು. ಈ ನಿಟ್ಟಿನಲ್ಲಿ ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿದೆ-ಡಾ. ಸಿ.ಎನ್. ಮಂಜುನಾಥ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.