ADVERTISEMENT

ಭೂ ದರ ನಿಗದಿ: ರೈತರ ಅಸಮ್ಮತಿ

ಕಂಚುಗಾರನಹಳ್ಳಿ ಜಮೀನು ಸ್ವಾಧೀನ; ರೈತರೊಂದಿಗೆ ಅಧಿಕಾರಿಗಳ ಮಾತುಕತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 13:50 IST
Last Updated 29 ಜನವರಿ 2021, 13:50 IST
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅಧ್ಯಕ್ಷತೆಯಲ್ಲಿ ರೈತರು–ಅಧಿಕಾರಿಗಳ ಸಭೆ ನಡೆಯಿತು
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅಧ್ಯಕ್ಷತೆಯಲ್ಲಿ ರೈತರು–ಅಧಿಕಾರಿಗಳ ಸಭೆ ನಡೆಯಿತು   

ರಾಮನಗರ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ತಾಲ್ಲೂಕಿನ ಬಿಡದಿ ಹೋಬಳಿಯ ಕಂಚುಗಾರನಹಳ್ಳಿಯಲ್ಲಿ ವಶಪಡಿಸಿಕೊಳ್ಳುತ್ತಿರುವ ಭೂಮಿಗೆ ಪರಿಹಾರ ದರ ನಿಗದಿಪಡಿಸುವಲ್ಲಿ ಶುಕ್ರವಾರ ನಡೆದ ಸಭೆಯು ಒಮ್ಮತಕ್ಕೆ ಬರುವಲ್ಲಿ ವಿಫಲವಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಐಎಡಿಬಿ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದರು. ಬಿಡದಿ–ಹಾರೋಹಳ್ಳಿ ಹೆದ್ದಾರಿಗೆ ಕೊಂಡಿಕೊಂಡಂತೆ ಇರುವ ಜಮೀನುಗಳ ಪರಿಹಾರ ಧನದ ವಿಚಾರದಲ್ಲಿ ಭೂ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ಮತ್ತೊಮ್ಮೆ ಸಭೆ ಕರೆಯಲಾಗಿದೆ. ಈ ಹಿಂದಿನ ಸಭೆಯಲ್ಲಿ ಕಂಚುಗಾರನಹಳ್ಳಿ ವ್ಯಾಪ್ತಿಯ ಒಳ ಭಾಗದಲ್ಲಿರುವ ಜಮೀನುಗಳಿಗೆ ಎಕರೆಗೆ ₹ 90 ಲಕ್ಷ ಹಾಗೂ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಜಮೀನುಗಳಿಗೆ ₹ 1 ಕೋಟಿ ಪರಿಹಾರ ನಿಗದಿಪಡಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಭೂ ಸಂತ್ರಸ್ಥರ ಪರವಾಗಿ ಮಾತನಾಡಿದ ತಿಮ್ಮೇಗೌಡ ‘ಸಂತ್ರಸ್ಥರ ರೈತರಿಗೆ ಯಾವ ಕಾಯ್ದೆಯ ಅಡಿ ದರ ನಿಗದಿಪಡಿಸಲಾಗುತ್ತಿದೆ’ ಎಂದು ಸ್ಪಷ್ಟನೆ ಕೇಳಿದರು. ‘ಕೆಐಎಡಿಬಿ ಕಾಯ್ದೆ 29/2 ಅಡಿ ದರ ನಿಗದಿ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಒಪ್ಪದ ಸಂತ್ರಸ್ಥರು ‘ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ನಿಯಮಗಳ ಅನುಸಾರವೇ ದರ ನಿಗದಿಪಡಿಸಬೇಕು’ ಎಂದು ಪಟ್ಟು ಹಿಡಿದರು.

ADVERTISEMENT

ಎಕರೆಗೆ ₹ 1.23 ಕೋಟಿ: ‘ಸರ್ಕಾರದ ಮಾರ್ಗಸೂಚಿ ದರದ ಅನ್ವಯ ಎಕರೆಗೆ ₹ 1.06 ಕೋಟಿ ಪರಿಹಾರ ನೀಡಲು ಅಧಿಕಾರಿಗಳು ಒಪ್ಪಿದ್ದಾರೆ’ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದರು. ಆದರೆ ಇದಕ್ಕೆ ಸಮ್ಮತಿಸದ ಸಂತ್ರಸ್ಥರು ‘ಪ್ರಸ್ತುತ ಎಕರೆಗೆ ₹ 1.3 ಕೋಟಿಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಆಗುತ್ತಿದೆ. ಅದಕ್ಕಿಂತ ಹೆಚ್ಚಿನ ದರ ನೀಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಕೆಐಎಡಿಬಿ ಅಧಿಕಾರಿಗಳು ಸಮ್ಮತಿಸಲಿಲ್ಲ. ‘ಈ ದರದಲ್ಲಿ ರೈತರಿಂದ ಜಮೀನು ಖರೀದಿ ಮಾಡಿ ಅಭಿವೃದ್ಧಿ ಮಾಡಿ ಕೈಗಾರಿಕೆಗಳಿಗೆ ಎಕರೆಗೆ ₹ 3.5 ಕೋಟಿ ವೆಚ್ಚದಲ್ಲಿ ಮಾರಬೇಕಾಗುತ್ತದೆ. ಇಷ್ಟು ದರದಲ್ಲಿ ಕೊಂಡುಕೊಳ್ಳಲು ಉದ್ಯಮಿಗಳು ಮುಂದೆ ಬರುವುದಿಲ್ಲ’ ಎಂದು ಆಕ್ಷೇಪಿಸಿದರು. ಅಂತಿಮವಾಗಿ ₹ 1.23 ಕೋಟಿ ಪರಿಹಾರ ದರ ನಿಗದಿಪಡಿಸುವುದಾಗಿ ಹೇಳಿದ ಜಿಲ್ಲಾಧಿಕಾರಿ, ಕೆಐಎಡಿಬಿ ಒಪ್ಪಿದಲ್ಲಿ ಇದೇ ದರ ಅಂತಿಮಗೊಳಿಸುವುದಾಗಿ ತಿಳಿಸಿದರು.

‘ಕೇವಲ ರಸ್ತೆ ಬದಿಯಲ್ಲಿ ಇರುವ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡುವುದಲ್ಲ. ಕಂಚುಗಾರನಹಳ್ಳಿ ಸರ್ವೆ ಸಂಖ್ಯೆಯಲ್ಲಿ ಇರುವ ಎಲ್ಲ ಜಮೀನುಗಳಿಗೂ ಒಂದೇ ರೀತಿಯ ಪರಿಹಾರ ನೀಡಬೇಕು’ ಎಂದು ರೈತರು ಸಭೆಯಲ್ಲಿ ಒತ್ತಾಯಿಸಿದರು.

ಕೈಬಿಡಲು ಒತ್ತಾಯ: ಕಂಚುಗಾರನಹಳ್ಳಿಯ ಸರ್ವೆ ಸಂಖ್ಯೆ 236 ರಲ್ಲಿರುವ ತಮ್ಮ ಜಮೀನು ಗ್ರಾಮ ವ್ಯಾಪ್ತಿಯಲ್ಲಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಬಾರದು’ ಎಂದು ಜಮೀನಿನ ಮಾಲೀಕ ರಾಮಚಂದ್ರ ಎಂಬುವರು ಮನವಿ ಮಾಡಿದರು. ‘ಗ್ರಾಮದ ಪರಿಮಿತಿಯಿಂದ 100 ಮೀಟರ್ ಒಳಗೆ ಇದ್ದಲ್ಲಿ ಮಾತ್ರ ಅಂತಹ ಜಮೀನನ್ನು ಸ್ವಾಧೀನದಿಂದ ಕೈಬಿಡಲಾಗುವುದು. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಕೆ.ಎನ್. ಅನುರಾಧ ತಿಳಿಸಿದರು.

2 ಎಕರೆ ಬಿಟ್ಟುಕೊಡಿ
‘ಕೈಗಾರಿಕೆಗಾಗಿ ನಮ್ಮ 8 ಎಕರೆ ಜಮೀನು ಪೂರ ಸ್ವಾಧೀನಕ್ಕೆ ಒಳಗಾಗುತ್ತಿದೆ. ಕಷ್ಟ ಪಟ್ಟು ಬೆಳೆದ ತೋಟ ನಾಶವಾಗುತ್ತಿದೆ. ಹೀಗಾಗಿ ಕನಿಷ್ಠ 2 ಎಕರೆ ಪ್ರದೇಶವನ್ನು ಬಿಟ್ಟುಕೊಡಿ’ ಎಂದು ರೈತ ಲೋಕೇಶ್‌ ಎಂಬುವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಒಮ್ಮೆ ಅಧಿಸೂಚನೆ ಆದ ನಂತರ ಜಮೀನು ಬಿಡಲು ಆಗದು. ಕಾನೂನಿನ ಅನ್ವಯ ಜಮೀನಿನ ಜೊತೆಗೆ ರೈತರಿಗೆ ಆಗುವ ಬೆಳೆ ನಷ್ಟಕ್ಕೂ ಪರಿಹಾರ ನೀಡಲಾಗುವುದು. ಇದೇ ಹಣದಲ್ಲಿ ಬೇರೆಡೆ ಜಮೀನು ಕೊಂಡು ಉತ್ತಮ ಕೃಷಿ ಮಾಡಿ’ ಎಂದು ಸಲಹೆ ನೀಡಿದರು.

ನಮ್ಮ ಜಮೀನು ಕೊಳ್ಳಿ!
‘ನಮ್ಮ ಜಮೀನಿನ ಪೈಕಿ ಅರ್ಧದಷ್ಟು ಜಮೀನು ಮಾತ್ರ ನೋಟಿಫೈ ಆಗಿದೆ. ಉಳಿದ ಅರ್ಧ ಜಮೀನನ್ನೂ ಕೆಐಎಡಿಬಿ ವಶಪಡಿಸಿಕೊಳ್ಳಬೇಕು’ ಎಂದು ಭೂಮಾಲೀಕರೊಬ್ಬರು ಜಿಲ್ಲಾಧಿಕಾರಿಗೆ ಮೊರೆ ಹೋದ ಪ್ರಸಂಗವೂ ನಡೆಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ನೋಟಿಫೈ ಆಗದಿದ್ದರೆ ವಶಪಡಿಸಿಕೊಂಡು ಪರಿಹಾರ ನೀಡಲು ಆಗದು. ಉಳಿದ ಜಮೀನನ್ನು ನೀವು ಖಾಸಗಿಯಾಗಿ ಇನ್ನಷ್ಟು ಉತ್ತಮ ಬೆಲೆಗೆ ಮಾರಲು ಅವಕಾಶ ಇದೆ’ ಎಂದರು. ಸಭೆಯಲ್ಲಿದ್ದ ಭೂ ಮಾಲೀಕ ತಿಮ್ಮೇಗೌಡ ‘ಜಮೀನು ನೀಡುವುದಾದರೆ ಸರ್ಕಾರಿ ದರಕ್ಕಿಂತ ಹೆಚ್ಚಿನ ಬೆಲೆ ನೀಡಿ ನಾನೇ ಕೊಂಡುಕೊಳ್ಳುತ್ತೇನೆ’ ಎಂದು ಭರವಸೆಯನ್ನೂ ನೀಡಿದರು.

ಸಾಗುವಳಿ: ಪರಿಶೀಲಿಸಿ ಪರಿಹಾರ
ಸಾಗುವಳಿ ಜಮೀನಿಗೆ ಹಕ್ಕುಪತ್ರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೂ ಭೂಪರಿಹಾರ ನೀಡಬೇಕು ಎಂದು ಸಭೆಯಲ್ಲಿದ್ದ ಕೆಲ ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

‘ಸರ್ಕಾರದಿಂದ ಜಮೀನು ಮಂಜೂರಾದವರಿಗೆ ಮಾತ್ರ ಪರಿಹಾರ ಸಿಗಲಿದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವ ರೈತರು ಮೊದಲು ಸಮಿತಿ ಮುಂದೆ ತಮ್ಮ ಅರ್ಜಿಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಅದನ್ನು ಆಧರಿಸಿ ಪರಿಹಾರ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.