ADVERTISEMENT

‘ಜೈಲುಗಳು ಕೈದಿಗಳ ಪರಿವರ್ತನಾ ಕೇಂದ್ರ’

ಬಂಧಿಗಳ ಕುಟುಂಬ ಸದಸ್ಯರಿಗೆ ಕಾನೂನು ನೆರವು ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 12:10 IST
Last Updated 19 ಜೂನ್ 2019, 12:10 IST
ಕಾರಾಗೃಹದಲ್ಲಿನ ಬಂಧಿಗಳ ಕುಟುಂಬದ ಸದಸ್ಯರುಗಳಿಗೆ ಕಾನೂನು ನೆರವು ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ  ಮಾತನಾಡಿದರು
ಕಾರಾಗೃಹದಲ್ಲಿನ ಬಂಧಿಗಳ ಕುಟುಂಬದ ಸದಸ್ಯರುಗಳಿಗೆ ಕಾನೂನು ನೆರವು ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ  ಮಾತನಾಡಿದರು   

ರಾಮನಗರ: ‘ಜೈಲು ಸೇರಿದರೆ ಜೀವನವೇ ಮುಗಿದು ಹೋಯಿತು ಎಂದು ಬಂಧಿಗಳ ಕುಟುಂಬದ ಸದಸ್ಯರು ಕೊರಗುವುದು ಬೇಡ. ಜೈಲುಗಳು ಬಂಧಿಗಳನ್ನು ಮನುಷ್ಯರನ್ನಾಗಿ ರೂಪಿಸುವ ಪರಿವರ್ತನಾ ಕೇಂದ್ರಗಳು’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎನ್. ಪ್ರಕಾಶ್ ತಿಳಿಸಿದರು.

ಇಲ್ಲಿನ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಬುಧವಾರ ಕಾರಾಗೃಹದಲ್ಲಿನ ಬಂಧಿಗಳ ಕುಟುಂಬದ ಸದಸ್ಯರುಗಳಿಗೆ ಕಾನೂನು ನೆರವು ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನಿನ ಅಜ್ಞಾನದಿಂದ ಯಾವುದೋ ಸನ್ನಿವೇಶದಲ್ಲಿ ನಡೆದ ಅಪರಾಧದಿಂದ ಅವರು ಈಗ ಬಂಧಿಗಳಾಗಿದ್ದಾರೆ. ಅವರ ಪ್ರಕರಣವನ್ನು ಪರಿಶೀಲಿಸಿ ನ್ಯಾಯಯುತ ತೀರ್ಮಾನವನ್ನು ನೀಡಲು ನ್ಯಾಯಾಲಯವಿದೆ. ಬಂಧಿಗಳ ಕುಟುಂಬದ ಸದಸ್ಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಜೀವನ ನಡೆಸಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಮಾತನಾಡಿ ಕಾನೂನು ಸೇವೆಗಳ ಪ್ರಾಧಿಕಾರವು ಬಡವರ, ಅಸಹಾಯಕರ ಧ್ವನಿಯಾಗಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದೆ. ಇದರ ಚಟುವಟಿಕೆಗಳು ವಿಸ್ತಾರವಾದಂತೆ ಸಾಮಾಜಿಕ ಅಪರಾಧ, ಮೂಢನಂಬಿಕೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಳಚೆ ಪ್ರದೇಶ, ಶಾಲೆ, ವೃದ್ಧಾಶ್ರಮ, ಗ್ರಾಮ, ಜೈಲು ಸೇರಿದಂತೆ ಜನ ವಾಸಿಸುವ ವಸತಿ ಪ್ರದೇಶಗಳಿಗೆ ಹೋಗಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾನೂನು ಅರಿವು-ನೆರವು ಅಗತ್ಯವಿರುವ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ, ಅಸಹಾಯಕರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಪ್ರಾಧಿಕಾರದ ಸದಸ್ಯೆ ಎಂ. ಜಯಮ್ಮ ಮಾತನಾಡಿ ನಾಗರಿಕರಲ್ಲಿ ಕಾನೂನು ತಿಳುವಳಿಕೆ ಹೆಚ್ಚಳವಾಗಿ ಜಾಗೃತಿ ಉಂಟಾಗುತ್ತಿದೆ. ನ್ಯಾಯ, ಆಡಳಿತದಲ್ಲಿ ಸಾರ್ವಜನಿಕರ ನಂಬಿಕೆ ಹೆಚ್ಚಾಗುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ, ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಂಧಿಗಳ ಕುಟುಂಬದವರಿಗೆ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮದಿಂದ ಮುಖ್ಯವಾಗಿ ಅಪರಾಧಗಳು ಮರುಕಳಿಸದಂತೆ ತಡೆಯುವ ಹಾಗೂ ಪಶ್ಚಾತ್ತಾಪಕ್ಕೆ ಒಳಗಾದವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವಾಗುತ್ತಿದೆ. ಬಾಲ್ಯವಿವಾಹ, ಪೋಕ್ಸೊ, ವರದಕ್ಷಿಣೆ ನಿಷೇಧ, ಮಹಿಳಾ ದೌರ್ಜನ್ಯ ಕುರಿತು ಇರುವ ಬಹು ಮುಖ್ಯ ಕಾನೂನುಗಳ ಅರಿವು ಉಂಟಾಗಿ, ಅಪರಾಧಗಳ ಸಂಖ್ಯೆ ಕಡಿಮೆ ಆಗಿದೆ ಎಂದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಜಯರಾಮಯ್ಯ, ಜೈಲರ್ ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.