ಮಾಗಡಿ: ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಇಲ್ಲಿಯ ತಿರುಮಲೆ ನಿವಾಸಿ, ವಕೀಲೆ ವಾಸುಕಿ (24) ತಾಯಿ ವಕೀಲೆ ವೆಂಕಟಲಕ್ಷ್ಮಿ ಅವರು, ಮಗಳ ಸಾವಿಗೆ ಕಾರಣರಾದ ಆರೋಪಿಗಳ ವಿಚಾರಣೆಗೆ ಒತ್ತಾಯಿಸಿ ಶನಿವಾರ ಪೊಲೀಸ್ ಠಾಣೆ ಎದುರು ಏಕಾಂಗಿಯಾಗಿ ಧರಣಿ ನಡೆಸಿದರು.
ಮಗಳ ಸಾವಿಗೆ ಬೆಂಗಳೂರಿನ ಆರ್.ಟಿ ನಗರದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಅವರ ಪುತ್ರ ಶ್ರವಣ ಕಾರಣ ಎಂದು ಠಾಣೆಗೆ ದೂರು ನೀಡಿದ್ದು, ಇದುವರೆಗೂ ಆರೋಪಿಯ ವಿಚಾರಣೆ ನಡೆಸಿಲ್ಲ. ಕೂಡಲೇ ಆತನ ವಿಚಾರಣೆ ನಡೆಸಬೇಕು. ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
‘ಶ್ರವಣ ಹಾಗೂ ವಾಸುಕಿ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಶ್ರವಣ್ ತಂದೆ ಗೋವಿಂದರಾಜು ರಾಜಕೀಯ ಪ್ರಭಾವ ಬಳಸಿ ಇಬ್ಬರನ್ನೂ ದೂರ ಮಾಡಲು ನೋಡಿದರು. ಮೊದಲು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಶ್ರವಣ ನಂತರ ಮದುವೆ ಯಾಗಲು ನಿರಾಕರಿಸಿದ. ಇದರಿಂದ ಮನನೊಂದು ನನ್ನ ಮಗಳು ಆ. 22ರಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ’ ಎಂದು ಮೃತಳ ತಾಯಿ ಆರೋಪಿಸಿದರು.
‘ಶ್ರವಣ್ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಆ. 26ರಂದು ದೂರು ನೀಡಲಾಗಿದೆ. ಆದರೆ, ಇಲ್ಲಿಯವರೆಗೂ ಪೊಲೀಸರು ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು. ಅಲ್ಲಿಯವರೆಗೂ ಧರಣಿ ಮುಂದುವರೆಸುತ್ತೇನೆ’ ಎಂದು ಪಟ್ಟು ಹಿಡಿದು ಠಾಣೆ ಎದುರು ಕುಳಿತರು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರ ಮನವರಿಕೆ ಮಾಡಿದ ನಂತರ ವೆಂಕಟಲಕ್ಷ್ಮಿ ಧರಣಿ ನಿಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.