
ರಾಮನಗರ ನಗರಸಭೆ ಅಧ್ಯಕ್ಷರಾಗಿ ಕೆ. ಶೇಷಾದ್ರಿ ಶಶಿ ಅವರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಸಾರ್ಥಕ ಸೇವೆಯ ಸಮರ್ಪಣೆ: ಜನಾಶೀರ್ವಾದಕ್ಕೆ ವರ್ಷದ ನಡೆ’ ಕಾರ್ಯಕ್ರಮ
ರಾಮನಗರ: ‘ಸಜ್ಜನಿಕೆಯ ನಾಯಕತ್ವ ಪ್ರಜಾಪ್ರಭುತ್ವಕ್ಕೆ ಅಗತ್ಯ. ಸಾಂಸ್ಕೃತಿಕ ಸಂವೇದನೆ ಉಳ್ಳವರು ಮಾತ್ರ ಸಮಾಜವನ್ನು ಅರ್ಥ ಮಾಡಿಕೊಂಡು ಮುನ್ನಡೆಸುತ್ತಾರೆ’ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷರಾಗಿ ಕೆ. ಶೇಷಾದ್ರಿ ಶಶಿ ಅವರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸಾರ್ಥಕ ಸೇವೆಯ ಸಮರ್ಪಣೆ: ಜನಾಶೀರ್ವಾದಕ್ಕೆ ವರ್ಷದ ನಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶೋಷಿತರು, ಬಡವರು ಹಾಗೂ ಸೌಲಭ್ಯ ವಂಚಿತರ ಪರ ದನಿ ಎತ್ತುವ ಬದ್ಧತೆ ಇರುವವರನ್ನು ಮಾತ್ರ ಜನ ನಾಯಕನೆಂದು ಪರಿಗಣಿಸುತ್ತಾರೆ. ಆ ಸಾಲಿನಲ್ಲಿ ಶಶಿ ಅವರು ನಿಲ್ಲುತ್ತಾರೆ. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರು ಕೂಡ ಜನ ಮೆಚ್ಚಿದ ನಾಯಕರಾಗಿದ್ದಾರೆ’ ಎಂದರು.
ಸಾಹಿತಿ ಡಾ. ಭೈರಮಂಗಲ ರಾಮೇಗೌಡ ಮಾತನಾಡಿ, ‘ಜನರು ನಡುವಿನಿಂದ ರೂಪುಗೊಳ್ಳುವವನೇ ನಿಜವಾದ ನಾಯಕ. ಜನರಿಗಾಗಿ ಮಿಡಿಯುವ ಶೇಷಾದ್ರಿ ಅವರು ಸಹ ಅಂತಹ ಜನನಾಯಕ. ನಗರಸಭೆ ಅಧ್ಯಕ್ಷರಾಗಿ ಅಭಿವೃದ್ಧಿ ಕೆಲಸಗಳ ಜೊತೆಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಮಾತನಾಡಿ, ‘ಶೇಷಾದ್ರಿ ಅವರಿಗೆ ಮತ್ತಷ್ಟು ರಾಜಕೀಯ ಪ್ರಜ್ಞೆ ಹಾಗೂ ನೈಪುಣ್ಯತೆಯನ್ನು ದೇವರು ಪರಿಗಣಿಸಲಿ’ ಎಂದರು.
ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕರಾದ ಎಂ.ಸಿ.ಅಶ್ವಥ್, ಎ. ಮಂಜುನಾಥ್, ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ಬಮೂಲ್ ನಿರ್ದೇಶಕ ಪಿ.ನಾಗರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಪಿರಾನ್ ಷಾ ವಲಿ ದರ್ಗಾದ ಶಹಬಾಜ್ ಅಲಿ ಷಾ ಚಿಸ್ತಿ, ಸಾಹುಕಾರ್ ಅಮ್ಜದ್, ಬಂಜಾರ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ, ನಗರಸಭೆ ಸದಸ್ಯರು, ಕಾಂಗ್ರೆಸ್–ಜೆಡಿಎಸ್ ಪದಾಧಿಕಾರಿಗಳು, ವಿವಿಧ ಸಂಘ– ಸಂಸ್ಥೆಗಳು ಹಾಗೂ ಸಂಘಟನೆಗಳ ಮುಖಂಡರು ಇದ್ದರು.
ಜನರ ಒತ್ತಾಸೆ ಮೇರೆಗೆ ನಗರಸಭೆ ಅಧ್ಯಕ್ಷನಾದ ನಾನು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಸಿಕ್ಕ ಬೆಂಬಲದೊಂದಿಗೆ ಒಂದು ವರ್ಷ ಪೂರೈಸಿದ್ದೇನೆ. ಇದರಿಂದ ಅಭಿವೃದ್ಧಿ ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಯಿತುಕೆ. ಶೇಷಾದ್ರಿ ಶಶಿ ನಗರಸಭೆ ಅಧ್ಯಕ್ಷ
‘ಸ್ಥಳೀಯರನ್ನು ವಿಧಾನಸೌಧಕ್ಕೆ ಕಳಿಸಬೇಕು’
‘ಪರಕೀಯತೆಯಿಂದಾಗಿ ಕ್ಷೇತ್ರದಲ್ಲಿ ಅನಾಥ ಪ್ರಜ್ಞೆ ಮನೆ ಮಾಡಿತ್ತು. ಶೇಷಾದ್ರಿ ಅವರು ನಗರಸಭೆ ಅಧ್ಯಕ್ಷರಾದ ಬಳಿಕ ಈಗ ಆಶ್ರಯ ಪ್ರಜ್ಞೆ ಮನೆ ಮಾಡಿದೆ. ಪರಕೀಯರಿಗೆ ಮತ ಕೊಟ್ಟು ಸಾಕಾಗಿದೆ. ಇನ್ನಾದರು ಕ್ಷೇತ್ರದಿಂದ ವಿಧಾನಸೌಧಕ್ಕೆ ಸ್ಥಳೀಯರನ್ನು ಕಳಿಸಿ ಕೊಡಬೇಕಿದೆ. ಆ ಶಕ್ತಿ ನಮಗಿದೆ ಎಂಬುದನ್ನು ತೋರಿಸಬೇಕಿದೆ. ಆ ಬದ್ಧತೆ ಇರುವ ಶೇಷಾದ್ರಿ ಅವರನ್ನು ನಾವೆಲ್ಲ ಬೆಂಬಲಿಸಬೇಕಾಗಿದೆ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಲೇಖಕ ಕೊತ್ತಿಪುರ ಶಿವಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.