ADVERTISEMENT

ಮೊಬೈಲ್ ಬಿಡಿ; ಕಲೆಯತ್ತ ಗಮನ ಕೊಡಿ: ನಿಶ್ಚಲಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 13:44 IST
Last Updated 9 ಮೇ 2025, 13:44 IST
<div class="paragraphs"><p>ಬಿಡದಿಯ ಬಾನಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ&nbsp;ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.&nbsp;</p></div>

ಬಿಡದಿಯ ಬಾನಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು. 

   

ಬಿಡದಿ (ರಾಮನಗರ): ‘ದೇಶದ ಯುವಜನತೆ ತಮ್ಮ ಅಮೂಲ್ಯ ಸಮಯವನ್ನು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಮನರಂಜನೆಗಾಗಿ ಯುವಜನರು ಮೊಬೈಲ್‌ಗೆ ದಾಸರಾಗುವ ಬದಲು, ನೈಜ ಕಲೆಗಳತ್ತ ಗಮನ ಹರಿಸಬೇಕು’ ಎಂದು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಬಾನಂದೂರಿನಲ್ಲಿ ಬಯಲಸಿದ್ಧ ಚಾರಿಟೇಬಲ್ ಟ್ರಸ್ಟ್ ಮತ್ತು ಗಾಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಜಾನಪದ ಮತ್ತು ರಂಗಭೂಮಿ ಕಲಾ ಸಂಪತ್ತು ವಿಫುಲವಾಗಿದೆ. ಈ ಹಿನ್ನೆಲೆಯಲ್ಲಿ ಯುವಜನರು ಕಲೆಗಳ ಕಡೆ ಗಮನಹರಿಸಿ, ಭವಿಷ್ಯದ ಸಾಂಸ್ಕೃತಿಕ ಭಾರತವನ್ನು ಕಟ್ಟಬೇಕು’ ಎಂದರು.

ADVERTISEMENT

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ‘ಕನ್ನಡ ಭಾಷೆ ಮತ್ತು ಜಾನಪದದ ಮೂಲಸತ್ವಗಳನ್ನು ಮರೆತರೆ ನಮ್ಮ ಬದುಕು ದುಸ್ತರವಾಗಲಿದೆ. ಭಾಷೆ ಮತ್ತು ಸಂಸ್ಕೃತಿ ವಿಷಯದಲ್ಲಿ ಪಕ್ಷಬೇಧ ಮರೆತು ಒಂದಾಗಬೇಕು. ಆಗ ಮಾತ್ರ ನಮ್ಮತನವನ್ನು ನಾವು ಉಳಿಸಿಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಮಾತನಾಡಿ, ‘ಕಿಲಾಡಿ ಕಲಾವಿದರ ಕಾಟದಿಂದಾಗಿ ಮೂಲ ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಅವರ ಹೆಸರಿನಲ್ಲಿ ಒಂದೆರಡು ಹಾಡುಗಳನ್ನು ಕಲಿತು, ದೇಶ– ವಿದೇಶಗಳಲ್ಲಿ ರಾರಾಜಿಸುತ್ತಿದ್ದಾರೆ. ಇದರ ಬದಲು ನೈಜ ಕಲಾವಿದರಿಗೆ ಮಾನ್ಯತೆ ಸಿಗಬೇಕಿದೆ. ದೇಶದ ಅಖಂಡತೆ ಸಾರುವ ಶಕ್ತಿ ಜಾನಪದಕ್ಕಿದ್ದು, ಸದಾ ಹರಿಯುವ ಗಂಗೆಯಾಗಿ ಪ್ರಸರಿಸುತ್ತದೆ’ ಎಂದು ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿ ಹಾಗೂ ಶಿಬಿರದ ನಿರ್ದೇಶಕ ನಂಜುಂಡಿ ಬಾನಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಮರ ಕಲತೆಗಳ ತಜ್ಞ ಹಾಸನ್ ರಘು ಅವರನ್ನು ಗಣ್ಯರು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ರೇವಣ ಸಿದ್ದಯ್ಯ, ಆಸರೆ ಸಂಸ್ಥೆಯ ನಟರಾಜ್, ಕಲಾವಿದ ಪಾರ್ಥಸಾರಥಿ, ಮುಖಂಡ ಸತೀಶ್, ಮುಖ್ಯ ಶಿಕ್ಷಕ ಕೃಷ್ಣಯ್ಯ, ಶಿಕ್ಷಕರಾದ ಹೊನ್ನಗಂಗಪ್ಪ, ಜಾನಪದ ಜಂಗಮ ಪ್ರತಾಪ್, ಎಸ್‌ಡಿಎಂಸಿ ಅಧ್ಯಕ್ಷ ಕೆಂಪಣ್ಣ ಹಾಗೂ ಶಿಬಿರದ ಸಂಚಾಲಕರಾದ ಶ್ರೇಯಸ್, ಕಾರ್ತಿಕ್ ಇದ್ದರು. ಮಕ್ಕಳು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.