
ಕನಕಪುರ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಕಚೇರಿ ಮತ್ತು ನಗರಸಭೆ ಸಹಯೋಗದಲ್ಲಿ ಇಲ್ಲಿನ ಬಿಜಿಎಸ್ ಬಡಾವಣೆಯಲ್ಲಿ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕನಕಪುರ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಬಿ.ವಿ. ಲತಾಶ್ರೀ, ‘ನಮ್ಮ ಮನೆಯನ್ನು ಯಾವ ರೀತಿ ಅಚ್ಚುಕಟ್ಟಾಗಿ ಇಟ್ಟಿಕೊಂಡಿರುತ್ತೇವೆ. ಹಾಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.
‘ನಾವು ವಾಸಿಸುವ ಪರಿಸರ ಸ್ವಚ್ಛವಾಗಿದ್ದರೆ ರೋಗರುಜಿನಗಳು ಹರಡುವುದಿಲ್ಲ, ನಾವು ಇರುವ ಜಾಗ ನಮ್ಮ ಸುತ್ತಮುತ್ತಲ ಪರಿಸರ ಸಂರಕ್ಷಣೆಯು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ’ ಎಂದರು.
ವಕೀಲ ಕೆ.ಸಿ.ಗೋಪಾಲಗೌಡ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಕಾಯ್ದೆಯ ಕುರಿತು ಮಾತನಾಡಿದರು.
ಗ್ರೇಡ್ 2 ತಹಶೀಲ್ದಾರ್ ಮನೋಹರ್, ನಗರಸಭೆ ಆಯುಕ್ತ ಶ್ರೀನಿವಾಸ್, ವಕೀಲ ಕಾಮೇಶ್ , ಬಿ.ಜಿ.ಎಸ್ ಬಡಾವಣೆಯ ನಾಗರೀಕರು, ನಗರಸಭೆಯ ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.