ಚನ್ನಪಟ್ಟಣ: ಆಟದ ಜೊತೆಗೆ ಪಾಠ, ಜೀವನ ಕೌಶಲ, ಸಕ್ರಿಯ ನಾಗರಿಕತ್ವ ಎಲ್ಲವನ್ನು ಹಂತ ಹಂತವಾಗಿ ಕಲಿಯುವ ನಿಟ್ಟಿನಲ್ಲಿ ಸಿಎಂಸಿಎ ಸಂಸ್ಥೆಯ ‘ನನ್ನ ಒಳಿತಿಗಾಗಿ ಗ್ರಂಥಾಲಯ’ ಕಾರ್ಯಕ್ರಮ ಎಲ್ಲರಿಗೂ ಉಪಯುಕ್ತವಾಗಿದೆ ಎಂದು ರಾಮನಗರ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನನ್ನ ಒಳಿತಿಗಾಗಿ ಗ್ರಂಥಾಲಯ’ ಚಟುವಟಿಕೆಗಳ ವಿಡಿಯೋ ಚಿತ್ರಣ, ಕಿರುಚಿತ್ರ ಪ್ರದರ್ಶನ ಹಾಗೂ ವಿಷಯಾಧಾರಿತ ಕಾಮಿಕ್ಸ್ ಪುಸ್ತಕಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಮನಗರ ಜಿಲ್ಲೆಯ ಗ್ರಂಥಾಲಯಗಳಿಗೆ ‘ನನ್ನ ಒಳಿತಿಗಾಗಿ ಗ್ರಂಥಾಲಯ’ ಕಾರ್ಯಕ್ರಮದಡಿ ಪ್ರತಿವಾರ 1200 ಮಕ್ಕಳು ಭೇಟಿ ನೀಡಿ, ಚಟುವಟಿಕೆ ಆಧಾರಿತ ಆನ್ ಲೈನ್ ತರಗತಿ ಹಾಗೂ ಆಫ್ ಲೈನ್ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂದಿನ ನೆಮ್ಮದಿದಾಯಕ, ಆರೋಗ್ಯದಾಯಕ ಹಾಗೂ ಸಮಾನತೆಯ ಬದುಕು ಕಟ್ಟಿಕೊಳ್ಳಲು ಬೇಕಾದ ವಿಚಾರ ಕೌಶಲಗಳನ್ನು ಕಲಿಯಲು ಇದು ಸಹಾಯಕ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ನಿವೇದಿತಾ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಕ್ಕಳಿಗೂ ಅನುಕೂಲ ಆಗುವಂತೆ ತಂತ್ರಜ್ಞಾನ ಉಪಕರಣಗಳಾದ ಸ್ಮಾರ್ಟ್ ಟಿವಿ, ಸ್ಪೀಕರ್, ವೆಬ್ ಕ್ಯಾಮರಾ ಒಳಗೊಂಡ ಸಂಪೂರ್ಣ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದಂತಾಗಿದೆ. ಇದು ಮಕ್ಕಳು, ಮಹಿಳೆಯರು, ಶಿಕ್ಷಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎಂದರು.
ಗ್ರಾ.ಪಂ. ಪಿಡಿಒ ಶ್ರೀಕಾಂತ್, ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕ ಶಿವಲಿಂಗಪ್ಪ, ಸುರೇಶ್, ಸಿಎಂಸಿಎ ಸಂಸ್ಥೆಯ ಸುನೀತಾ, ಪ್ರೀತಾ, ವೆಂಕಟೇಶ್, ಶಿಲ್ಪಾ, ಶ್ರೀನಿವಾಸ್, ಗೌತಮ್, ಅಬ್ಬೂರು ಶ್ರೀನಿವಾಸ್, ಯಶೋಧ, ಕೋಡಂಬಹಳ್ಳಿ ಶ್ರೀನಿವಾಸ್, ತಗಚಗೆರೆ ನಾಗೇಶ್, ವಿರುಪಾಕ್ಷಿಪುರ ಸುರೇಶ್, ಗ್ರಾಮಸ್ಥರು ಭಾಗವಹಿಸಿದ್ದರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯಗಳಿಗೆ ವಿಷಯಾಧಾರಿತ ಕಾಮಿಕ್ಸ್ ಪುಸ್ತಕಗಳನ್ನು ಆಯಾ ಸೂಪರ್ ಮೆಂಟರ್ಸ್ ಗಳ ಮೂಲಕ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.