ರಾಮನಗರ: ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ನಾಲ್ಕು ವರ್ಷಗಳ ಹಿಂದೆ ಖರೀದಿಸಿರುವ ಹಾಗೂ ಪೂರೈಕೆಯಾಗಿರುವ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಆಸ್ಪತ್ರೆ ಮೇಲೆ ಬುಧವಾರ ದಾಳಿ ನಡೆಸಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.
2021–22ನೇ ಸಾಲಿನಲ್ಲಿ ನಡೆದಿರುವ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಎಸ್‌ಪಿ ಸ್ನೇಹ ಪಿ.ವಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಶಿವಪ್ರಸಾದ್, ರಾಜೇಶ್, ಇನ್‌ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಬೆಳಿಗ್ಗೆ 11ಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್, ಸ್ಥಾನಿಕ ವೈದ್ಯಾಧಿಕಾರಿ ಡಾ. ನಾರಾಯಣಸ್ವಾಮಿ ಸೇರಿದಂತೆ ಆಡಳಿತಾತ್ಮಕ ಅಧಿಕಾರಿಗಳು ಸೇರಿದಂತೆ ವಿವಿಧ ಸಿಬ್ಬಂದಿಯನ್ನು ತಂಡ ವಿಚಾರಣೆ ನಡೆಸಿತು. ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳನ್ನು ಪಡೆದು ಸಂಜೆ 5.30ರವರೆಗೆ ಪರಿಶೀಲನೆ ನಡೆಸಿತು.
ಜಿಲ್ಲಾಸ್ಪತ್ರೆಯ ಶಸ್ತಚಿಕಿತ್ಸಕರಾಗಿ 2021–22ನೇ ಸಾಲಿನಲ್ಲಿ ಡಾ. ವಿಜಯ ನರಸಿಂಹ ಕಾರ್ಯನಿರ್ವಹಿಸಿದ್ದರು. ಅವರ ವರ್ಗಾವಣೆಯಾದ ಬಳಿಕ ಡಾ. ಶಶಿಧರ್ ಮತ್ತು ಡಾ. ಪದ್ಮಾ ಜಿ.ಎಲ್ ಅವರು ಸೇವೆ ಸಲ್ಲಿಸಿದ್ದರು. ಸದ್ಯ ಡಾ. ಮಂಜುನಾಥ್ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಖರೀದಿಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯ ಮಾಹಿತಿ ನೀಡುತ್ತಿದ್ದಾರೆ. ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಪೂರಕವಾಗಿ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಎಲ್ಲಾ ಕಡತಗಳನ್ನು ಪರಿಶೀಲಿಸಿದ ಬಳಿಕ ಅವ್ಯವಹಾರ ನಡೆದಿದೆಯೇ ಇಲ್ಲವೊ ಎಂಬುದು ಗೊತ್ತಾಗಲಿದೆ. ಆಗ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅಧಿಕೃತವಾಗಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಜಿಲ್ಲಾಸ್ಪತ್ರೆಯಲ್ಲಿ ಔಷಧ ಖರೀದಿಯಲ್ಲಿ ಕೇಳಿಬಂದಿರುವ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಡತಗಳ ಪರಿಶೀಲನೆ ನಡೆಸಲಾಗಿದೆ. ಗುರುವಾರವೂ ಪರಿಶೀಲನೆ ಮುಂದುವರಿಯಲಿದೆ
ಸ್ನೇಹ ಪಿ.ವಿ. ಲೋಕಾಯುಕ್ತ ಎಸ್ಪಿ ಬೆಂಗಳೂರು ದಕ್ಷಿಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.