ADVERTISEMENT

ರಾಜ್ಯಕ್ಕೆ ಕೇಂದ್ರ ಕೊಟ್ಟಿರುವುದು ಕೇವಲ ‘ಚೊಂಬು’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 5:23 IST
Last Updated 20 ಏಪ್ರಿಲ್ 2024, 5:23 IST
ಕುದೂರು ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಮುಖಂಡರು ಮತಯಾಚನೆ ನಡೆಸಿದರು
ಕುದೂರು ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಮುಖಂಡರು ಮತಯಾಚನೆ ನಡೆಸಿದರು   

ಕುದೂರು: ಮುಂದಿನ ಎರಡು ವರ್ಷದೊಳಗೆ ಮಾಗಡಿ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಶ್ರೀರಂಗ ಏತ ನೀರಾವರಿ ಯೋಜನೆ ಎಕ್ಸ್ ಪ್ರೆಸ್‌ ಲಿಂಕ್ ಕೆನಾಲ್ ಮೂಲಕ ನೀರು ತುಂಬಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ಹತ್ತು ವರ್ಷಗಳವರೆಗೂ ಗ್ಯಾರಂಟಿ ಯೋಜನೆಗಳು ಇರುತ್ತವೆ. ವಿರೋಧ ಪಕ್ಷದಗಳ ಟೀಕೆಗಳಿಗೆ ಜನರು ಕಿವಿಗೊಡಬಾರದು ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ ರೇವಣ್ಣ ಮಾತನಾಡಿ, ರಾಜ್ಯಕ್ಕೆ ತೆರಿಗೆ ವಿಷಯದಲ್ಲಿ ಆದ ಅನ್ಯಾಯವನ್ನು ಡಿ.ಕೆ ಸುರೇಶ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ನರೇಗಾದಲ್ಲಿ ಅತಿ ಹೆಚ್ಚು ಕಾಮಗಾರಿ ನಡೆಸಿರುವುದು ಡಿ.ಕೆ ಸುರೇಶ್. ಸಂಸತ್ ಸದಸ್ಯನಾಗಿ ಪಂಚಾಯಿತಿ ಸದಸ್ಯನಂತೆ ಸಾಮಾನ್ಯ ಜನರ ಕಷ್ಟ ಸುಖ ಆಲಿಸುವ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ 28 ಸಂಸದರಲ್ಲಿ ಸದನದಲ್ಲಿ ರಾಜ್ಯದ ಹಿತ ಕಾಪಾಡುವ ಏಕೈಕ ಸಂಸದ ಡಿ.ಕೆ ಸುರೇಶ್. ಅವರನ್ನು ಗೆಲ್ಲಿಸುವ ಮೂಲಕ ರಾಕ್ಷಸ ಪ್ರವೃತ್ತಿ ದುಷ್ಟ ಶಕ್ತಿ ಬಿಜೆಪಿಯನ್ನು ಮಟ್ಟ ಹಾಕಬೇಕಿದೆ ಎಂದರು.

ಶಾಸಕ ಎಚ್.ಸಿ ಬಾಲಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ಕೊಟ್ಟಿರುವುದು ಕೇವಲ ಚೊಂಬು ಎಂದು ಟೀಕಿಸಿದರು.

ಇದೇ ವೇಳೆ ‘6 ತಿಂಗಳ ಸಾಧನಾ ಪಥ‘ ಎಂಬ ಪುಸ್ತಿಕೆಯನ್ನು ಮುಖಂಡರು ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ದಕ್ಷಿಣ ಕಾಶಿ ಶಿವಗಂಗೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೈಕ್ ರ‍್ಯಾಲಿ ಚಾಲಗೆ ನೀಡಲಾಯಿತು.

ಕರ್ನಾಟಕ ಸಹಕಾರ ಮಹಾಮಂಡಳಿ ನಿರ್ದೇಶಕ ಎಚ್.ಎನ್ ಅಶೋಕ್, ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ಮಂಜೇಶ್ ಕುಮಾರ್, ಮುಖಂಡರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಕಣ್ಣೂರು ಜೈಶಂಕರ್, ಪುಟ್ಟರಾಜು, ಮಾಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಬಿ ಬಾಲರಾಜು, ಕೆ.ಬಿ ಚಂದ್ರಶೇಖರ್, ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ಚುನಾವಣಾ ಪ್ರಚಾರದಲ್ಲಿ ಭಾಗಿಯದ ಜನಸ್ತೋಮ
ಬೈಕ್ ರಾಲಿ ಮೂಲಕ ಕಾಂಗ್ರೆಸ್ ಮುಖಂಡರನ್ನು ಶಿವಗಂಗೆಯಿಂದ ಕುದೂರು ಪಟ್ಟಣಕ್ಕೆ ಕರೆತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.