ADVERTISEMENT

ಕನ್ನಡ ಭಾಷೆ ನೆಲ ಜಲಕ್ಕೆ ಅನ್ಯಾಯವಾದರೆ ಕನ್ನಡ ಪರ ಸಂಘಟನೆ ನಿಲ್ಲುತ್ತದೆ:ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 13:22 IST
Last Updated 29 ನವೆಂಬರ್ 2024, 13:22 IST
ಮಾಗಡಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಶುಕ್ರವಾರ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು
ಮಾಗಡಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಶುಕ್ರವಾರ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು   

ಮಾಗಡಿ: ಇಲ್ಲಿನ ಕೆಂಪೇಗೌಡ ವೃತ್ತದ ಬಳಿ ‘ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ’ ವತಿಯಿಂದ 9ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. 

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಎಚ್.ಸಿ. ಬಾಲಕೃಷ್ಣ, ‘ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ಅನ್ಯಾಯವಾದರೆ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿಯುತ್ತವೆ. ಇದರಿಂದಾಗಿ ಕನ್ನಡಿಗರಿಗೆ ನ್ಯಾಯ ಸಿಗುತ್ತಿದೆ’ ಎಂದು ಪ್ರತಿಪಾದಿಸಿದರು. 

ಕನ್ನಡಪರ ಸಂಘಟನೆಗಳ ಪರಿಣಾಮ ರಾಜ್ಯದ ಮೇಲಿನ ದಬ್ಬಾಳಿಕೆ ಕಡಿಮೆಯಾಗಿದೆ. ಕನ್ನಡ ದಿನಾಚರಣೆ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ವರ್ಷದ 365 ದಿನವೂ ಕನ್ನಡಾಂಭೆಯ ಆರಾಧನೆ ಮಾಡಬೇಕು. ನಾವು ವ್ಯವಹಾರಕ್ಕಾಗಿ ಅನ್ಯ ಭಾಷೆಯನ್ನು ಕಲಿಯಬೇಕು. ಆದರೆ, ನಮ್ಮ ಭಾಷೆಯನ್ನು ಗೌರವಿಸಬೇಕು. ಹಾಗಾದಾಗ ಮಾತ್ರವೇ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಾಧ್ಯವಾಗಲಿದೆ ಎಂದರು. 

ADVERTISEMENT

ಮಾಗಡಿ ಪಟ್ಟಣದಲ್ಲಿ ಕನ್ನಡ ಭವನ ಮತ್ತು ಪತ್ರಿಕಾ ಭವನ ನಿರ್ಮಾಣಕ್ಕೆ ಈಗಾಗಲೇ ಜಾಗ ನಿಗದಿಪಡಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೂ ನೆರವು ನೀಡುವ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. 

‘ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ’ ಸಂಸ್ಥಾಪಕ ಅಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ ಮಾತನಾಡಿ, ‘ಕನ್ನಡ ಭಾಷೆ, ನೆಲ, ಜಲ ವಿಚಾರದಲ್ಲಿ ಅನ್ಯಾಯವಾದರೆ ನಮ್ಮ ಸಂಘಟನೆ ಹೋರಾಟಕ್ಕೆ ಸಿದ್ಧವಾಗಿದೆ’ ಎಂದು ಹೇಳಿದರು. 

ಪಟ್ಟಣದ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದಿಂದ ಡಾ. ರಾಜಕುಮಾರ್ ರಸ್ತೆ ಮೂಲಕ ಡೂಮ್ ಲೈಟ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ಬೆಳ್ಳಿ ರಥದಲ್ಲಿ ಭುವನೇಶ್ವರಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಗಾರಡಿ ಗೊಂಬೆ, ಪಟ್ಟದ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡದವು. 

ಖ್ಯಾತ ಗಾಯಕರಿಂದ ರಸಮಂಜರಿ ನಡೆಯಿತು. 

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಸದಸ್ಯ ಪುರುಷೋತ್ತಮ್, ಜೆ.ಪಿ. ಚಂದ್ರೇಗೌಡ, ಕಲ್ಕೆರೆ ಶಿವಣ್ಣ, ಶಶಾಂಕ್ ರೇವಣ್ಣ, ಶೈಲಜಾ, ವನಜ, ನಾರಾಯಣಪ್ಪ, ಲೋಕೇಶ್, ಪ್ರಸನ್ನ ಗೌಡ, ಮಹಂತೇಶ್, ಪುರುಷೋತ್ತಮ್, ಸಂಪತ್  ಭಾಗವಹಿಸಿದ್ದರು.

ರಸ್ತೆಗಳಿಗೆ ಕವಿಗಳ ಹೆಸರಿಡಲು ಸೂಚನೆ

ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಸಾಹಿತಿಗಳು ಮತ್ತು ಕವಿಗಳ ಹೆಸರನ್ನು ಮಾಗಡಿಯ ವಿವಿಧ ರಸ್ತೆಗಳಿಗೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.  ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿಗಳ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡಲಾಗುವುದು. ನಾಡಗೀತೆ ರಚಿಸಿದ ಕುವೆಂಪು ಅವರಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.