ಮಾಗಡಿ: ಪಟ್ಟಣದ ಹೃದಯ ಭಾಗದ ಜಿಕೆಬಿಎಂಎಸ್ ಸರ್ಕಾರಿ ಶಾಲೆ ಸರ್ಕಾರಿ ಶಾಲೆ ಶತಮಾನ ಪೂರೈಸಿದ್ದರೂ ಅನುದಾನದ ನಿರೀಕ್ಷೆಯಲ್ಲಿದೆ.
ಶಾಲೆ ಶತಮಾನ ಪೂರೈಸಿದ್ದರೂ ಇನ್ನೂ ಶತಮಾನೋತ್ಸವ ಆಚರಣೆ ನಡೆದಿಲ್ಲ. 1908ರಲ್ಲಿ ಆರಂಭವಾದಈ ಸರ್ಕಾರಿ ಶಾಲೆ ತಾಲ್ಲೂಕಿನಲ್ಲಿ ಮಾದರಿ ಶಾಲೆಯಾಗಿದೆ. ಆದರೆ, ಶಾಲೆಯ ಮೇಲ್ಚಾವಣಿ ಬೀಳುವ ಸ್ಥಿತಿಯಲ್ಲಿದೆ. ಬೀಳುವ ಸ್ಥಿತಿಯಲ್ಲಿರುವ ಮೂರು ಕೊಠಡಿಗಳಿಗೆ ಶಿಕ್ಷಕರು ಬೀಗ ಹಾಕಿದ್ದಾರೆ. ಆದರೆ, ಇನ್ನೂ ದುರಸ್ತಿ ಭಾಗ್ಯ ಬಂದಿಲ್ಲ.
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ, ಶಾಲೆಯ ಸ್ಥಿತಿ ಮಾತ್ರ ಬದಲಾಗಿಲ್ಲ. ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಉನ್ನತ ಸ್ಥಾನದಲ್ಲಿರುವ ಅನೇಕರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು. ಆದರೆ ಶಾಲೆಯ ಸ್ಥಿತಿ ಮಾತ್ರ ಅಧೋಗತಿಗೆ ತಲುಪಿದೆ.
ಒಂಬತ್ತು ಕೊಠಡಿ ಇರುವ ಶಾಲೆಯ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಆರು ಕೊಠಡಿಗಳಲ್ಲಿ ಪಾಠ, ಪ್ರವಚನ ನಡೆಯುತ್ತಿವೆ. ಕಳೆದ ಸಾಲಿನಲ್ಲಿ ಒಂದನೇ ತರಗತಿಗೆ ಇಂಗ್ಲಿಷ್ ಮಾಧ್ಯಮ ಆರಂಭವಾಗಿದ್ದು, ಮಕ್ಕಳ ದಾಖಲಾತಿ ಹೆಚ್ಚಾಗುವ ನಿರೀಕ್ಷೆ ಇದೆ.
ಮಂಗಳೂರು ಹೆಂಚಿನ ಮೇಲ್ಛಾವಣಿಯ ಜಿಕೆ ಬಿಎಂಎಸ್ ಶಾಲೆ ಮೇಲ್ಚಾವಣಿ ದುರಸ್ತಿಗೆ ಅನುದಾನದ ಅಗತ್ಯವಿದೆ. ಶಾಲಾ ಕಾಂಪೌಂಡ್ ಸುತ್ತಲೂ ದೊಡ್ಡ ಮರ ಬೆಳೆದಿವೆ. ಮರದ ಎಲೆಗಳು ಹೆಂಚಿನ ಮೇಲೆ ಬಿದ್ದು, ಮಳೆ ನೀರು ಸೇರಿ ಪಾಚಿ ಹಿಡಿದಿದೆ. ಮರದ ಕೊಂಬೆಗಳು ಬಿದ್ದ ಪರಿಣಾಮ ಮೇಲ್ಚಾವಣಿ ಉದುರಿ ಬೀಳುತ್ತಿದ್ದು, ಛಾವಣಿ ಸರಿಪಡಿಸಲು ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.
ಸರ್ಕಾರ ಕಳೆದ ಅರ್ಧ ವರ್ಷದ ಸಾಲಿನಲ್ಲಿ ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಪಾಠ ಮಾಡಲು ಇಂಗ್ಲಿಷ್ ಶಿಕ್ಷಕರು ಇಲ್ಲ. ಈಗ ಇರುವ ಶಿಕ್ಷಕರಿಗೆ ಇಂಗ್ಲಿಷ್ ತರಬೇತಿ ಕೊಡಿಸಿ ಪಾಠ ಮಾಡಿಸಲಾಗುತ್ತಿದೆ. ಐದು ಶಿಕ್ಷಕರು ಮತ್ತು ಇಬ್ಬರು ನಿಯೋಜಿತ ಶಿಕ್ಷಕರೊಂದಿಗೆ ಸಂಭಾಳಿಸಲಾಗುತ್ತಿದೆ ಎಂದು ಮುಖ್ಯ ಶಿಕ್ಷಕಿ ಪದ್ಮ ಹೇಳುತ್ತಾರೆ.
ಶತಮಾನ ಕಳೆದಿರುವ ಜಿಕೆಬಿಎಂಎಸ್ ಸರ್ಕಾರಿ ಶಾಲೆಯನ್ನು ಪಬ್ಲಿಕ್ ಶಾಲೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುತ್ತಿದೆ. ಇದಕ್ಕಾಗಿ ರೂಪರೇಷೆ ಸಿದ್ಧಪಡಿಸಲಾಗಿದೆ. ಶತಮಾನ ಶಾಲೆ ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆಎಚ್.ಸಿ.ಬಾಲಕೃಷ್ಣ ಶಾಸಕ
ಜಿಕೆಬಿಎಂಎಸ್ ಶಾಲೆಯ ಎರಡು ಕೊಠಡಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಾಸಕ ಬಾಲಕೃಷ್ಣ ಅವರ ಜೊತೆ ಸೋಮವಾರ ಸಭೆ ನಿಗದಿಯಾಗಿದೆ. ಮಾಗಡಿಗೆ ಶಿಕ್ಷಣ ಸಚಿವರು ಬರುವ ಹಿನ್ನೆಲೆಯಲ್ಲಿ ಜಿಕೆಬಿಎಂಎಸ್ ಶಾಲೆಯ ಸ್ಥಿತಿಯನ್ನು ತಿಳಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಲಲಾಗಿದೆ. ಶಿಕ್ಷಣ ಇಲಾಖೆಯು ಈ ಶಾಲೆಯ ಅಭಿವೃದ್ಧಿಗೆ ಬದ್ಧವಾಗಿದೆಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ಮಾಗಡಿ
ಬಡ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ಹರಿಸಬೇಕು. ಶತಮಾನ ಕಂಡ ಶಾಲೆಯ ಅಭಿವೃದ್ಧಿ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಯುವ ಕೆಲಸ ಮಾಡಬೇಕು.ಚಂದನ ಎಸ್‌ಡಿಎಂಸಿ ಅಧ್ಯಕ್ಷ
ನೂರಾದರೂ ಶತಮಾನೋತ್ಸವ ಸಂಭ್ರಮ ಇಲ್ಲ!
ಜಿಕೆ ಬಿಎಂಎಸ್ ಶಾಲೆ ಆರಂಭವಾಗಿ 117 ವರ್ಷ ಉರುಳಿವೆ. ಈ ಶಾಲೆ ಆರಂಭಕ್ಕೂ ಮುನ್ನ ಪೇಟೆ ಶಾಲೆ ಎಂಬ ಹೆಸರಿನಲ್ಲಿ 10 ವರ್ಷ ಮಕ್ಕಳಿಗೆ ವಿದ್ಯೆ ನೀಡಿತ್ತು. ಅದನ್ನು ಸೇರಿಸಿ ಒಟ್ಟು 127 ವರ್ಷ ಕಳೆದಿದ್ದರೂ ಶತಮಾನೋತ್ಸವ ಸಂಭ್ರಮ ಕಾಣುತ್ತಿಲ್ಲ. ಹಳೆ ವಿದ್ಯಾರ್ಥಿಗಳು ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡು ಕಳೆದ ವರ್ಷ ಶಾಲೆಗೆ ಭೇಟಿ ನೀಡಿ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಶಿಕ್ಷಕರನ್ನು ಸನ್ಮಾನಿಸಿದ್ದರು.
ಕೆಪಿಎಸ್ ಶಾಲೆ ಪ್ರಸ್ತಾವನೆ
ಪಟ್ಟಣದ ಪುರಸಭೆ ಸಮೀಪದ ಜಿಕೆ ಬಿಎಂಎಸ್ ಶಾಲೆ ಜಿಜಿಎಂಎಸ್ ಶಾಲೆ ಹಾಗೂ ಜಿಜಿಎಚ್ಎಸ್ ಮೂರು ಶಾಲೆಗಳನ್ನು ಒಟ್ಟಿಗೆ ಸೇರಿಸಿ ಕರ್ನಾಟಕ ಪಬ್ಲಿಕ್ ಶಾಲೆ ಮಾಡಲು ಶಾಸಕ ಎಚ್.ಸಿ. ಬಾಲಕೃಷ್ಣ ಮುಂದಾಗಿದ್ದಾರೆ. ಮೂರು ಶಾಲೆ ಒಟ್ಟಾಗಿ ಸೇರಿದರೆ ಮಕ್ಕಳ ಸಂಖ್ಯೆ ಹೆಚ್ಚಾಗಲಿದ್ದು ಆಗ ವಿಷಯವಾರು ಶಿಕ್ಷಕರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಇದರಿಂದ ಈ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ಕರ್ನಾಟಕ ಪಬ್ಲಿಕ್ ಶಾಲೆ ಯಾವ ವರ್ಷದಿಂದ ಆರಂಭವಾಗುತ್ತದೆ ಎಂಬುದು ಇನ್ನೂ ಗೊತ್ತಿಲ್ಲ ಎನ್ನುತ್ತಾರೆ ಶಿಕ್ಷಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.