ADVERTISEMENT

ಮಾಗಡಿ: ಅನ್ನ ಸಂತರ್ಪಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:50 IST
Last Updated 16 ಏಪ್ರಿಲ್ 2022, 4:50 IST
ಮಾಗಡಿಯ ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗರ ಅರವಟಿಗೆಯಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ಕೆ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು
ಮಾಗಡಿಯ ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗರ ಅರವಟಿಗೆಯಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ಕೆ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು   

ಮಾಗಡಿ: ‘ರಂಗನಾಥ ಸ್ವಾಮಿ ಜಾತ್ರೆಗೆ ಬರುವ ಭಕ್ತರಿಗೆ ರಥೋತ್ಸವದಂದು ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನಲ್ಲಿ ಅರವಟಿಗೆ ಆರಂಭಿಸಿ ಹತ್ತು ವರ್ಷಗಳಿಂದ ಉಚಿತವಾಗಿ ಅನ್ನದಾನ ಮಾಡುತ್ತಿರುವುದು ಒಕ್ಕಲಿಗರ ಔದಾರ್ಯದ ಸಂಕೇತವಾಗಿದೆ’ ಎಂದು ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಅಧ್ಯಕ್ಷ ನಂಜಾವಧೂತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ತಿರುಮಲೆ ರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ ಗುರುವಾರ ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗರ ಅರವಟಿಗೆ ಸಮಿತಿಯಿಂದ ಏರ್ಪಡಿಸಿದ್ದ ಉಚಿತ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಂಪೇಗೌಡರ ಮಾಗಡಿ ಸೀಮೆಯಲ್ಲಿ ಅನ್ನದಾನಕ್ಕೆ ಎಂದಿಗೂ ಕೊರತೆ ಬಂದಿಲ್ಲ. ಎಲ್ಲರೂ ದೇವರನ್ನು ನಂಬಿಕೊಂಡು ಕಾಯಕ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಆದಿಚುಂಚನಗಿರಿ ಮಠದ ಗುರುಗಳ ಹೆಸರಿನಲ್ಲಿ ನಡೆಯುತ್ತಿರುವ ಅರವಟಿಗೆಗೆ ಸಮಸ್ತ ಒಕ್ಕಲಿಗ ಕುಲಬಾಂಧವರು ಮತ್ತು ಇತರೇ ಮಠದ ಭಕ್ತರು ಸಹಾಯಹಸ್ತ ಚಾಚಬೇಕು ಎಂದು ಹೇಳಿದರು.

ADVERTISEMENT

ಅನ್ನದಾನ ಮಾಡುವುದು ಪುಣ್ಯದ ಕೆಲಸ. ಒಕ್ಕಲಿಗ ಸಮುದಾಯದವರು ಸಂಘಟಿತರಾಗಬೇಕು. ಹೊಲ ಉಳುಮೆ ಮಾಡುವುದರ ಜೊತೆಗೆ ದೇಶವನ್ನಾಳುವ ಕೆಂಪೇಗೌಡರಂತಹ ನಾಯಕರಾಗಬೇಕು ಎಂದರು.

ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕ ಎ. ಮಂಜುನಾಥ್‌, ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸಮಾಜ ಸೇವಕ ಕೆ. ಬಾಗೇಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಎ.ಎಚ್‌. ಬಸವರಾಜು ಮಾತನಾಡಿದರು.

ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ರೂಪೇಶ್‌, ಜೆಡಿಎಸ್‌ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಶೈಲಜಾ, ಬಾಲಗಂಗಾಧರನಾಥ ಸ್ವಾಮಿ ಅರವಟಿಗೆ ಸಮಿತಿಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.