ADVERTISEMENT

ಮಾಗಡಿ: ಅದರಂಗಿ ಅರಣ್ಯದಲ್ಲಿ ಮಾವಿನ ಓಟೆ ನೆಡುವ ಕಾರ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:23 IST
Last Updated 15 ಜುಲೈ 2020, 16:23 IST
ಮಾಗಡಿ ಅದರಂಗಿ ಅರಣ್ಯ ಪ್ರದೇಶದಲ್ಲಿ ಮಾವಿನ ಓಟೆ ನೆಟ್ಟ ರೈತ ಬಸವರಾಜಯ್ಯ.
ಮಾಗಡಿ ಅದರಂಗಿ ಅರಣ್ಯ ಪ್ರದೇಶದಲ್ಲಿ ಮಾವಿನ ಓಟೆ ನೆಟ್ಟ ರೈತ ಬಸವರಾಜಯ್ಯ.   

ಮಾಗಡಿ: ಅರೆಮಲೆನಾಡಾಗಿದ್ದ ಮಾಗಡಿ ಸೀಮೆಯಲ್ಲಿ ಅರಣ್ಯ ಸಂಪತ್ತು ಉಳಿಸಿ, ಬೆಳೆಸಲು ಸರ್ಕಾರ ಮುಂದಾಗಬೇಕು ಎಂದು ಪರಿಸರವಾದಿ ರುದ್ರೇಶ್‌ ಅದರಂಗಿ ಮನವಿ ಮಾಡಿದರು.

ಬೆಂಗಳೂರಿನ ಲಾಲ್‌ಬಾಗ್‌ನಿಂದ ಅಯ್ದು ತಂದಿದ್ದ ಸಹಸ್ರಾರು ಮಾವಿನ ಓಟೆಗಳನ್ನು ಬುಧವಾರ ಅದರಂಗಿ ಅರಣ್ಯಪ್ರದೇಶದಲ್ಲಿ ನೆಲದಲ್ಲಿ ಗುಂಡಿ ತೆಗೆದು ಮಾವಿನ ನೆಟ್ಟು ಅವರು ಮಾತನಾಡಿದರು.

ಐದು ವರ್ಷಗಳಿಂದ ಮಳೆಗಾಲದಲ್ಲಿ ರೈತ ಬಸವರಾಜಯ್ಯ ಅವರ ಸಹಕಾರದೊಂದಿಗೆ 5 ಸಾವಿರಕ್ಕಿಂತ ಅಧಿಕ ವಿವಿಧ ಜಾತಿಯ ಸಸಿಗಳನ್ನು ನೆಡುತ್ತಾ ಬಂದಿದ್ದೇವೆ. ಕಾಚಕಲ್ಲಪ್ಪ ಸ್ವಾಮಿ ಬೆಟ್ಟದ ತಪ್ಪಲಿನಿಂದ ಅದರಂಗಿ ಸುತ್ತಲೂ ಬೆಟ್ಟಗುಡ್ಡಗಳಿವೆ. ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಅಳಿಲ ಸೇವೆ ಎಂದು ಹೇಳಿದರು.

ADVERTISEMENT

ರೈತ ಬಸವರಾಜಯ್ಯ ಮಾತನಾಡಿ, ನಮ್ಮ ಬಾಲ್ಯದಲ್ಲಿ ಅದರಂಗಿ ಸುತ್ತಮುತ್ತ ದೊಡ್ಡದೊಡ್ಡ ಮರಗಳಿದ್ದವು. ದನಕುರಿ ಮೇಕೆ ಮೇಯಿಸಲು ಹೋದಾಗ ಹೊಟ್ಟೆತುಂಬುವಷ್ಟು ಹಣ್ಣುಗಳು ಸಿಕ್ಕುತ್ತಿದ್ದವು. ತುಂತುರು ಮಳೆಯ ನಡುವೆ ನೆಟ್ಟ ಮಾವಿನ ಓಟೆಗಳು ಮೊಳಕೆ ಒಡೆದು ಸಸಿಗಳಾಗುವುದನ್ನು ನೋಡುವುದೇ ಒಂದು ಸಂಭ್ರಮ ಎಂದು ಸಂತಸ ವ್ಯಕ್ತಪಡಿಸಿದರು.

ಸಿದ್ಧಗಂಗಾಶ್ರೀಗಳು ಒಮ್ಮೆ ಊರಿಗೆ ಭೇಟಿ ನೀಡಿದ್ದಾಗ ಅರಣ್ಯ ಉಳಿಸುವಂತೆ ಕರೆ ನೀಡಿದ್ದ ಮಾತುಗಳೇ ನಮಗೆ ಪ್ರೇರಣೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.