ADVERTISEMENT

ಮಾಗಡಿ ಕೋಟೆರಾಮೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:42 IST
Last Updated 16 ಮಾರ್ಚ್ 2019, 14:42 IST
ಮಾಗಡಿ ಕೋಟೆರಾಮೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ತಹಶೀಲ್ದಾರ್‌ ನರಸಿಂಹಮೂರ್ತಿ ಯಾತ್ರಾದಾನ ಸೇವೆ ನೆರವೇರಿಸಿದರು.ಆಗಮಿಕ ವಿದ್ವಾನ್‌ ಕೆ.ಎನ್‌.ಗೋಪಾಲ ದೀಕ್ಷಿತ್‌ ಇದ್ದರು..
ಮಾಗಡಿ ಕೋಟೆರಾಮೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ತಹಶೀಲ್ದಾರ್‌ ನರಸಿಂಹಮೂರ್ತಿ ಯಾತ್ರಾದಾನ ಸೇವೆ ನೆರವೇರಿಸಿದರು.ಆಗಮಿಕ ವಿದ್ವಾನ್‌ ಕೆ.ಎನ್‌.ಗೋಪಾಲ ದೀಕ್ಷಿತ್‌ ಇದ್ದರು..   

ಮಾಗಡಿ: ಪಟ್ಟಣದ ಕೋಟೆ ರಾಮೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಶನಿವಾರ ಮಧ್ಯಾಹ್ನ ಬ್ರಹ್ಮರಥೋತ್ಸವ ಭಕ್ತಾದಿಗಳ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು. ತಹಶೀಲ್ದಾರ್‌ ನರಸಿಂಹಮೂರ್ತಿ ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಯಾತ್ರಾದಾನ ಸೇವೆ ನೆರವೇರಿಸಿದರು.

ಉಭಯ ಅಮ್ಮನವರ ಸಹಿತ ರಾಮೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಾಕಾರದಲ್ಲಿ ಮೂರು ಸುತ್ತಹಾಕಿಸಿ ರಥದ ಮೇಲಿಟ್ಟರು. ತಹಶೀಲ್ದಾರ್‌ ರು ರಥಕ್ಕೆ ಪೂಜೆ ಸಲ್ಲಿಸಿ, ರಥದ ಚಕ್ರಗಳಿಗೆ ಈಡುಗಾಯಿ ಒಡೆದು ಪೂಜಿಸಿದರು. ಮಂಗಳವಾದ್ಯ ಸಹಿತ ರಥೋತ್ಸವಕ್ಕೆ ಚಾಲನೆ ನೀಡಿದರು.

ಪ್ರಧಾನ ಅರ್ಚಕ ರಾಮಕೃಷ್ಣ ದೀಕ್ಷಿತ್‌ ಮಾತನಾಡಿ, ‘ಮುಮ್ಮಡಿ ಕೆಂಪೇಗೌಡರ ತಾಯಿ ಕೆಂಪಮ್ಮ ಅವರಿಗೆ ಬಹಳ ವರ್ಷಗಳ ತನಕ ಪುತ್ರ ಸಂತಾನವಿರಲಿಲ್ಲ. ದಕ್ಷಿಣದ ರಾಮೇಶ್ವರಸ್ವಾಮಿಗೆ ಹರಕೆ ಸಲ್ಲಿಸಿ, ಗಂಡು ಸಂತಾನವಾದರೆ ನಿಮ್ಮ ದರ್ಶನಕ್ಕೆ ಬಂದು ಹರಕೆ ಸಲ್ಲಿಸುವುದಾಗಿ ತಿಳಿಸಿದರು. ಹಲವು ವರ್ಷಗಳ ಬಳಿಕ ಪುತ್ರ ಸಂತಾನಭಾಗ್ಯವಾದ ಕಾರಣ ದಕ್ಷಿಣದ ರಾಮೇಶ್ವರಕ್ಕೆ ಹೋಗಲು ಸಾದ್ಯವಾಗಲಿಲ್ಲ. ತನ್ನ ಹರಕೆಯಂತೆ ಮಗನಿಂದ ಕೋಟೆಯ ದೇವಮೂಲೆಯಲ್ಲಿ ಸ್ಥಳಿಯ ವಡ್ಡರ ಸಹಾಯದಿಂದ ಅಮೂಲ್ಯ ಕೆತ್ತನೆಯ ಗುಡಿಯನ್ನು ಕಟ್ಟಿಸಿ, ಕಲ್ಯಾಣಿ ನಿರ್ಮಿಸಿ, ಹೊಂಬಾಳಮ್ಮನಪೇಟೆ ಕೆರೆಯ ಕೆಳಗಿನ ಭೂಮಿಯನ್ನು ಕೋಟೆ ರಾಮೇಶ್ವರ ಸ್ವಾಮಿ ದೇವಾಲಯಕ್ಕೆ ಧೂಪದೀಪಕ್ಕೆ ದಾನ ನೀಡಿದ್ದರು’ ಎಂದು ವಿವರಿಸಿದರು.

ADVERTISEMENT

‘ಇಂದಿಗೂ ಸಂತಾನ ಇಲ್ಲದವರು ಈ ದೇವರಲ್ಲಿ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ. ತಿಗಳ ಮತ್ತು ಇತರೆ ಸಮುದಾಯದವರು ಇಂದಿಗೂ ಯಾವುದೇ ವ್ಯಾಜ್ಯ ನಡೆದರೂ ಈ ದೇವಾಲಯದಲ್ಲಿ ಕುಳಿತು ಮಾತನಾಡಿ, ನ್ಯಾಯ ತೀರ್ಮಾನ ಮಾಡಿಕೊಳ್ಳುವುದು ನಡೆದುಬಂದಿದೆ. ಭಕ್ತರ ಪ್ರಿಯ ಕರುಣಾಳು ಕೋಟೆರಾಮೇಶ್ವರಸ್ವಾಮಿ ಮಹಿಮೆ ಅನನ್ಯವಾದುದು’ ಎಂದರು.

ಆಗಮಿಕ ವಿದ್ವಾನ್‌ ಕೆ.ಎನ್‌.ಗೋಪಾಲ್‌ ದೀಕ್ಷಿತ್‌ ತಂಡದವರು ವೇದಮಂತ್ರ ಪಠಿಸಿದರು. ಮುಖ್ಯಬೀದಿಗಳಲ್ಲಿ ರಥವನ್ನು ಎಳೆಯಲಾಯಿತು. ಭಕ್ತರು ಪೂಜೆ ಸಲ್ಲಿಸಿದರು.

ಚಕ್ರಬಾವಿ, ಮಾನಗಲ್‌, ಕರಲಮಂಗಲ, ಮಾಡಬಾಳ್‌, ಅಗಲಕೋಟೆ, ಕಲ್ಯಾ, ಮಾಗಡಿ, ಹೆಬ್ಬಳಲು, ಮೋಟಗೊಂಡನಹಳ್ಳಿ, ಮುದುಗೆರೆ, ಸುಗ್ಗನಹಳ್ಳಿಗಳಿಂದ ಬಂದಿದ್ದ ಬ್ರಾಹ್ಮಣ ವಂಶಜರು, ವಿಪ್ರಮಹಿಳೆಯರು ಕೋಟೆ ರಾಮೇಶ್ವರಸ್ವಾಮಿ ವಿವಾಹಮಹೋತ್ಸವದಲ್ಲಿ ಪೂಜೆ ಸಲ್ಲಿಸಿದರು. ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಆನಂದಪ್ಪ,ಶಿವಾನಂದ್‌, ನಟರಾಜು, ಹೊಸಪೇಟೆ ಡ್ರೈವರ್‌ ಎಚ್‌.ನಾರಾಯಣಪ್ಪ, ಚಾಮುಂಡೇಶ್ವರಿ ದೇವಾಲಯದ ಅರ್ಚಕ ಶಂಕರ್‌, ಕೊಟ್ಟಣಗೇರಿಯ ಕುಮಾರಸ್ವಾಮಿ, ಚಕ್ರಬಾವಿಯ ಜಯಶ್ರೀ ಕೃಷ್ಣಮೂರ್ತಿ, ಸೋಮೇಶ್ವರಸ್ವಾಮಿ ದಾಸೋಹ ಸಮಿತಿಯ ಖಜಾಂಚಿ ರಾಮಣ್ಣ, ಹನುಮಂತಯ್ಯ, ನಂದಿ ಡ್ರೈವಿಂಗ್‌ ಶಾಲೆಯ ಪ್ರಾಂಶುಪಾಲ ನರಸಿಂಹಮೂರ್ತಿ, ರೇಣುಕಾ ಈಡಿಗ, ಹನುಮಂತಯ್ಯ, ತಿರುಮಲೆ ಬಾಲರಾಜು, ರಮೇಶ್‌, ಪಾರಂಪರೀಕ ಬೊಂಬೆ ತಜ್ಞರಾದ ಅಗಲಕೋಟೆ ಎ.ಸತ್ಯನಾರಾಯಣ, ಅಂಜನ್‌, ವಕೀಲ ಟಿ.ಕೆ.ಹಿರಿಯಣ್ಣ, ನಿವೃತ್ತ ಶಿಕ್ಷಕ ಡಿ.ಎಸ್‌.ವೆಂಕಟೇಶ ಮೂರ್ತಿ, ವಿಜಯಾದೀಕ್ಷಿತ್‌, ಶ್ರೀಪಾದಕಾವಲುಗಾರ ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.