
ಮಾಗಡಿ: ರಾಜ್ಯದಲ್ಲೇ ಮೊದಲ ಬಾರಿಗೆ ಭೂ ದಾಖಲಾತಿಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ ಡಿಜಿಟಲ್‌ಗೊಳಿಸುವ ಪೈಲಟ್ ಯೋಜನೆಗೆ ಮಾಗಡಿ ತಾಲ್ಲೂಕು ಆಯ್ಕೆಯಾಗಿದ್ದರೂ ಈ ಪ್ರಕ್ರಿಯೆ ವಿಳಂಬವೇ ರೈತರ ಕಷ್ಟಕ್ಕೆ ಕಾರಣವಾಗಿದೆ. ತಾಲ್ಲೂಕು ಕಚೇರಿಯಲ್ಲಿ ಪ್ರತಿ ದಿನ ಭೂದಾಖಲೆ ಪ್ರತಿ ಪಡೆಯಲು ಬರುವ ರೈತರು ಗಂಟೆಗಟ್ಟಲೇ ಸಾಲಿನಲ್ಲಿ ನಿಂತರೂ ಅವರ ದಾಖಲೆಗಳು ಸ್ಕ್ಯಾನ್ ಆಗದ ಕಾರಣ ಖಾಲಿ ಕೈಯಲ್ಲಿ ಹಿಂತಿರುಗಬೇಕಾಗಿದೆ.
ಒಂದು ದಾಖಲೆಗೆ ಒಂದು ತಿಂಗಳು: ರೈತರು ತಮ್ಮ ಅನುಭವವನ್ನು ಹೀಗೆ ವಿವರಿಸುತ್ತಾರೆ. ‘ಬೆಳಗ್ಗೆ 10ಗಂಟೆಗೆ ಕಚೇರಿ ತೆರೆಯುವಾಗಲೇ ಅರ್ಜಿ ಹಾಕಿಕೊಂಡು ಬರುತ್ತೇವೆ. ಸ್ಕ್ಯಾನಿಂಗ್ ಕೊಠಡಿಯಲ್ಲಿ ಅರ್ಜಿ ಸಲ್ಲಿಸಿ, ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತೇವೆ. ಆದರೆ, ಕಂಪ್ಯೂಟರ್‌ನಲ್ಲಿ ಸರ್ವೆ ನಂಬರ್ ಪರಿಶೀಲಿಸಿದಾಗ ‘ನಿಮ್ಮ ದಾಖಲೆ ಸ್ಕ್ಯಾನ್ ಆಗಿಲ್ಲ’ ಎಂದು ಹೇಳಿ, ಉಪ ತಹಶೀಲ್ದಾರ್ ಬಳಿಗೆ ಕಳುಹಿಸುತ್ತಾರೆ. ಅಲ್ಲಿಂದ ‘ಒಂದು ವಾರ ಬಿಟ್ಟು ಬನ್ನಿ’ ಎಂದು ಹೇಳಿ ಕಳುಹಿಸಲಾಗುತ್ತದೆ. ಒಂದು ವಾರದ ನಂತರ ಬಂದರೆ ಅದೇ ಕಥೆ. ಒಂದೇ ದಾಖಲೆಗೆ ತಿಂಗಳುಗಟ್ಟಲೆ ಓಡಾಡಬೇಕಾಗುತ್ತದೆ’.
ತಾಲ್ಲೂಕಿನ ಎಲ್ಲ ಹೋಬಳಿಗಳ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯ ಇನ್ನೂ ಪೂರ್ಣಗೊಳ್ಳದಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ. ರೈತರ ಆಕ್ರೋಶ ಹೆಚ್ಚಾಗಿರುವುದನ್ನು ಗಮನಿಸಿದ ಅಧಿಕಾರಿಗಳು, ಕೆಲವೊಮ್ಮೆ ಹಿಂಬರಹ ನೀಡಿ ದಾಖಲೆ ಸಿದ್ಧವಾದಾಗ ತೆಗೆದುಕೊಳ್ಳಲು ಹೇಳುತ್ತಾರೆ. ಆದರೆ, ಈ ವ್ಯವಸ್ಥೆಯೂ ಸರಿ ಹೋಗಿಲ್ಲ.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ ಪ್ರತಿಕ್ರಿಯಿಸಿ, ‘ರೈತರನ್ನು ಅಲೆದಾಡಿಸಬೇಡಿ. ಯಾವ ಹೋಬಳಿ ಯಾವ ಸರ್ವೆ ನಂಬರ್‌ಗಳ ದಾಖಲೆಗಳು ಸ್ಕ್ಯಾನ್ ಆಗಿವೆ ಮತ್ತು ಯಾವುದು ಬಾಕಿ ಇದೆ ಎಂಬ ಮಾಹಿತಿಯನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರದರ್ಶಿಸಬೇಕು. ಅದರಂತೆ ಸ್ಕ್ಯಾನ್ ಆಗಿರದ ಸರ್ವೆ ನಂಬರ್‌ಗಳ ರೈತರು ಕಚೇರಿಗೆ ಬರುವುದೇ ಇಲ್ಲ. ಇಲ್ಲದಿದ್ದರೆ ಎಲ್ಲ ರೈತರೂ ಪ್ರತಿದಿನ ಕಚೇರಿಗೆ ಓಡಾಡಬೇಕಾಗುತ್ತದೆ’ ಎಂದರು.
ಶಾಸಕ ಮತ್ತು ತಹಶೀಲ್ದಾರ್ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಸ್ಕ್ಯಾನಿಂಗ್ ಕಾರ್ಯವನ್ನು ವೇಗಗೊಳಿಸಿ ತಾಲ್ಲೂಕು ಕಚೇರಿಯಲ್ಲಿ ಮತ್ತೊಂದು ಕೌಂಟರ್ ಆರಂಭಿಸಬೇಕು. ಇಲ್ಲದಿದ್ದರೆ ರೈತರು ದೊಡ್ಡ ಪ್ರಮಾಣದ ಪ್ರತಿಭಟನೆಗೆ ಇಳಿಯಬೇಕಾಗಬಹುದು ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.