ಮಾಗಡಿ ಗುಡ್ ಮಾರ್ನಿಂಗ್ ಕಾರ್ಯಕ್ರಮದ ಅಂಗವಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಬುಧವಾರ ಬೈಚಾಪುರದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ತಹಶೀಲ್ದಾರ್ ಶರತ್ ಕುಮಾರ್ ಜೊತೆಯಲ್ಲಿದ್ದರು
ಮಾಗಡಿ: ‘ಗುಡ್ ಮಾರ್ನಿಂಗ್ ಮಾಗಡಿ’ ಕಾರ್ಯಕ್ರಮದ ಅಡಿ ಬುಧವಾರ ಬೆಳಗ್ಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳೊಂದಿಗೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದರು.
ಪಟ್ಟಣದಲ್ಲಿ ಸ್ವಚ್ಛತೆ, ರಸ್ತೆ ಗುಂಡಿ ಬಗ್ಗೆ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಬಿತ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಸ ಎಸೆಯದೆ ಸ್ವಚ್ಛತೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನಂತರ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ತೆರಳಿ ತಿಂಡಿ ಸವಿದರು.
ಮುಂದಿನ ತಿಂಗಳು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮಾಗಡಿಗೆ ಕರೆಸಿ ₹50 ಕೋಟಿ ವೆಚ್ಚದಲ್ಲಿ ಕೋಟೆ ಅಭಿವೃದ್ಧಿ, ₹10 ಕೋಟಿ ವೆಚ್ಚದಲ್ಲಿ ಗೌರಮ್ಮನಕೆರೆ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.ಮಾಜಿ ಸಂಸದ ಡಿ.ಕೆ.ಸುರೇಶ್ ₹20 ಕೋಟಿ ಅನುದಾನದಲ್ಲಿ ಎನ್ಇಎಸ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ, ಬೈಚಾಪುರ ಸರ್ಕಲ್‌ನಿಂದ ಹೊಂಬಾಳಮ್ಮ ಪೇಟೆ ಸರ್ಕಲ್‌ವರೆಗೆ ಎರಡು ಪಥದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ತಹಶೀಲ್ದಾರ್ ಶರತ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ, ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಇದ್ದರು.
ತಿಂಡಿ ಗುಣಮಟ್ಟ ಪರಿಶೀಲನೆ
ಮಂಗಳವಾರ ಸಂಜೆ ಪುರಸಭೆ ಅಧಿಕಾರಿಗಳ ಜತೆ ಇಂದಿರಾ ಕ್ಯಾಂಟೀನ್‌ಗೆ ತೆರಳಿ ಪರಿಶೀಲನೆ ನಡೆಸಿದರು. ಕ್ಯಾಂಟಿನ್ ನಿರ್ವಹಣೆ, ಆಹಾರದ ಗುಣಮಟ್ಟ, ವೇಳಾಪಟ್ಟಿ ಕುರಿತು ಮಾಹಿತಿ ಪಡೆದರು. ಕ್ಯಾಂಟಿನ್ ಕಟ್ಟಡ ದುರಸ್ತಿಗೆ ಅನುದಾನ ನೀಡಲಾಗುವುದು. ಗುಣಮಟ್ಟದ ತಿಂಡಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಆವರಣದಲ್ಲಿ ಹೋಟೆಲ್ ಆರಂಭಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು. ಶೀಘ್ರ ಯೋಜನೆ ರೂಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೋಟೆಲ್ ಆರಂಭಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.