ಬಂಧನ
(ಸಾಂದರ್ಭಿಕ ಚಿತ್ರ)
ಮಾಗಡಿ: ಇಪ್ಪತ್ತು ದಿನಗಳ ಹಿಂದೆ ಇಲ್ಲಿಯ ಗಿರವಿ ಅಂಗಡಿ ಮಾಲೀಕರ ಮನೆಯ ಬೀಗ ಮುರಿದು ನಾಲ್ಕು ಕೆ.ಜಿ ಚಿನ್ನ ಮತ್ತು ಐದು ಲಕ್ಷ ರೂಪಾಯಿ ಕಳವು ಮಾಡಿ ವಿದೇಶಕ್ಕೆ ಹಾರಲು ಸಜ್ಜಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಚಿಕ್ಕಮಗಳೂರು ನಿವಾಸಿ ಸಾದಿಕ್ (44) ಹಾಗೂ ಆತನ ಸಹಚರ ಅಮ್ಜಾನ್ (24) ಎಂಬುವರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಮಾಗಡಿ ಪೊಲಿಸರು ಗುರುವಾರ ಇಲ್ಲಿಗೆ ಕರೆತಂದಿದ್ದಾರೆ.
ಅರ್ಧ ತಾಸು ತಡವಾಗಿದ್ದರೂ ಆರೋಪಿಗಳು ವಿದೇಶಕ್ಕೆ ಹಾರುತ್ತಿದ್ದರು. ಅಷ್ಟರಲ್ಲಿ ಇಬ್ಬರನ್ನೂ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಯಿತು ಎಂದು ಮಾಗಡಿ ಪೊಲೀಸರು ತಿಳಿಸಿದ್ದಾರೆ.
ಮಾಗಡಿಯ ಡಾ.ರಾಜ್‌ಕುಮಾರ್ ಮುಖ್ಯರಸ್ತೆಯಲ್ಲಿರುವ ವಾಸವಾಂಭ ಬಟ್ಟೆ ಹಾಗೂ ಗಿರವಿ ಅಂಗಡಿ ಮಾಲೀಕ ವೇಣುಗೋಪಾಲ ಗುಪ್ತಾ ಸೆ.22ರಂದು ಕುಟುಂಬ ಸಮೇತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಚನ್ನಪಟ್ಟಣಕ್ಕೆ ತೆರಳಿದ್ದರು. ಇದನ್ನು ಗಮನಿಸಿದ್ದ ಕಳ್ಳರು ಮನೆಯ ಮೇಲಿನ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದರು.
ವಾಸವಿ ದೇವಸ್ಥಾನದ ಖಜಾಂಚಿಯೂ ಆಗಿದ್ದ ಗುಪ್ತಾ ಅವರು ದೇವಸ್ಥಾನದ ಚಿನ್ನಾಭರಣ ಮತ್ತು ಗಿರವಿ ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟಿದ್ದರು. ಎಲ್ಲವೂ ಸೇರಿ ಒಟ್ಟು ನಾಲ್ಕು ಕೆ.ಜಿ. ಚಿನ್ನಾಭರಣದ ಜೊತೆ ಐದು ಲಕ್ಷ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು.
ಚನ್ನಪಟ್ಟಣದಿಂದ ಗುಪ್ತಾ ಕುಟುಂಬ ಅದೇ ದಿನ ರಾತ್ರಿ ಹಿಂದಿರುಗಿ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಟ್ಟಣದ ಪ್ರಮುಖ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು.
ಆರೋಪಿಗಳು ಕಳ್ಳತನ ಮಾಡುವ ಒಂದು ದಿನ ಮುಂಚೆ ನಕಲಿ ನಂಬರ್ ಪ್ಲೇಟ್ ಇದ್ದ ಎಸ್‌ಯುವಿ ಕಾರಿನಲ್ಲಿ ಮಾಗಡಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಓಡಾಡಿದ್ದರು. ಭಾನುವಾರವೂ ಪಟ್ಟಣದಲ್ಲಿ ಓಡಾಡಿ ವಿದ್ಯುತ್ ಕಡಿತವಾಗುವುದನ್ನೇ ಕಾದಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಈ ಮಾಹಿತಿ ಲಭ್ಯವಾಗಿದೆ.
ಕಳ್ಳತನ ಮಾಡಿದ ನಂತರ ಆರೋಪಿಗಳು ವಾಹನದಲ್ಲಿ ಚಿಕ್ಕಮಗಳೂರಿಗೆ ಮರಳಿದ್ದರು. ಮಾರ್ಗಮಧ್ಯೆ ಒಂದು ಕಡೆ ಚಹಾ ಕುಡಿಯಲು ಕಾರು ನಿಲ್ಲಿಸಿದ್ದರು. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಮುಖ ಸೆರೆಯಾಗಿತ್ತು. ದೃಶ್ಯಗಳನ್ನು ಗಮನಿಸಿದ ಪೊಲೀಸರಿಗೆ ಕಳ್ಳತನ ಮಾಡಿದ್ದು ಕುಖ್ಯಾತ ಕಳ್ಳ ಚಿಕ್ಕಮಗಳೂರಿನ ಸಾದಿಕ್ ಹಾಗೂ ಆತನ ಸಹಚರ ಅಮ್ಜಾನ್ ಎಂಬ ಮಾಹಿತಿ ಲಭ್ಯವಾಗಿತ್ತು.
ಮಾಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿಗಳು ಚಿಕ್ಕಮಂಗಳೂರಿಗೆ ಹೋಗಿ ಅಲ್ಲಿಂದ ಮುಂಬಯಿಗೆ ತೆರಳಿದ್ದರು. ಮುಂಬೈಯಿಂದ ವಿದೇಶಕ್ಕೆ ಹಾರುವ ಯೋಜನೆ ಇತ್ತು. ಈ ಮಾಹಿತಿ ದೊರೆತ ತಕ್ಷಣ ಮಾಗಡಿ ಪೊಲೀಸರು ಮುಂಬಯಿಗೆ ಧಾವಿಸಿದ್ದರು. ಇನ್ನೂ ಅರ್ಧ ತಾಸು ತಡವಾಗಿದ್ದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. ವಿಮಾನ ನಿಲ್ದಾಣದಲ್ಲಿಯೇ ಇಬ್ಬರನ್ನೂ ಬಂಧಿಸಿದರು.
ಸಾದಿಕ್ ಈ ಹಿಂದೆ ತಿಪಟೂರಿನಲ್ಲಿ ಕೂಡ ಮನೆ ಕಳ್ಳತನ ಮಾಡಿ 2 ಕೆ.ಜಿ ಚಿನ್ನಾಭರಣ ಕದ್ದು ವಿದೇಶಕ್ಕೆ ಹಾರಿದ್ದ. ಸಾದಿಕ್ ಹಾಗೂ ತಂಡ ಈಗಾಗಲೇ ಅನೇಕ ಕಡೆ ಕಳ್ಳತನ ಮಾಡಿದೆ. ಈತನ ಜೊತೆ ಇನ್ನೂ ಮೂವರು ಭಾಗಿಯಾಗಿರುವ ಮಾಹಿತಿ ಇದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.