ADVERTISEMENT

ಶಿವ ಸ್ಮರಣೆಯಲ್ಲಿ ಮಿಂದೆದ್ದ ಜನ

ಮಹಾ ಶಿವರಾತ್ರಿ ಸಂಭ್ರಮ; ದೇವಾಲಯಗಳಲ್ಲಿ ವಿಶೇಷ ಪೂಜೆ; ಭಕ್ತರಿಂದ ವಿಶೇಷ ದರ್ಶನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 4:58 IST
Last Updated 27 ಫೆಬ್ರುವರಿ 2025, 4:58 IST
ಮಹಾ ಶಿವರಾತ್ರಿ ಅಂಗವಾಗಿ ರಾಮನಗರದ ಐಜೂರಿನಲ್ಲಿರುವ ಐಜೂರಿನ ಮಲ್ಲೇಶ್ವರದ ಬಡಾವಣೆಯ ಮಲ್ಲೇಶ್ವರದ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆದರು
ಮಹಾ ಶಿವರಾತ್ರಿ ಅಂಗವಾಗಿ ರಾಮನಗರದ ಐಜೂರಿನಲ್ಲಿರುವ ಐಜೂರಿನ ಮಲ್ಲೇಶ್ವರದ ಬಡಾವಣೆಯ ಮಲ್ಲೇಶ್ವರದ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆದರು   

ರಾಮನಗರ: ಶಿವಸ್ಮರಣೆಯ ದಿನವಾದ ಮಹಾ ಶಿವರಾತ್ರಿ ಹಬ್ಬವನ್ನು ನಗರದಲ್ಲಿ ಬುಧವಾರ ಭಕ್ತಿ–ಭಾವದಿಂದ ಆಚರಿಸಲಾಯಿತು. ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ಭಕ್ತರು ಕುಟುಂಬ ಸಮೇತ ಬೆಳಿಗ್ಗೆಯಿಂದ ರಾತ್ರಿವರೆಗೆ ದೇವಾಲಯಗಳಲ್ಲಿ ಮಾರುದ್ದ ಸರದಿಯಲ್ಲಿ ನಿಂತ ದೇವರ ದರ್ಶನ ಪಡೆದು ಪುನೀತರಾದರು.

ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿರುವ ದೇವಾಲಯಗಳನ್ನು ತಳಿರು ತೋರಣ ಹಾಗೂ ವಿದ್ಯುದ್ದೀಪಗಳಿಂದ ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಐಜೂರಿನ ಮಲ್ಲೇಶ್ವರದ ಬಡಾವಣೆಯ ಮಲ್ಲೇಶ್ವರದ ದೇವಸ್ಥಾನ, ಛತ್ರದ ಬೀದಿಯ ಅರ್ಕೇಶ್ವರದ ದೇವಾಲಯ, ಅರ್ಕಾವತಿ ಬಡಾವಣೆಯ ಸಂಕಷ್ಟಹರ ಗಣಪತಿ ದೇವಸ್ಥಾನ, ಅರ್ಚಕರಹಳ್ಳಿಯ ಮಹದೇಶ್ವರ, ಅರಳೇಪೇಟೆ ಬಸವೇಶ್ವರ, ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು.

ದೇವಾಲಯಗಳಲ್ಲಿ ಶಿವ ಸ್ಮರಣೆಯ ಭಜನೆ, ಹಾಡುಗಳು ಕಿವಿಗಳಿಗೆ ಇಂಪು ತಂದವು. ಇತಿಹಾಸ ಪ್ರಸಿದ್ಧ ಅರ್ಕೇಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇವಾಲಯದ ಬೀದಿ ಹಾಗೂ ಮುಖ್ಯರಸ್ತೆಯುದ್ದಕ್ಕೂ ವಿದ್ಯುದ್ದೀಪಗಳಿಂದ ಮಾಡಿದ್ದ ಆಕರ್ಷಕ ಅಲಂಕಾರವು ಕಣ್ಮನ ಸೆಳೆಯಿತು. ಕೆಲ ದೇವಸ್ಥಾನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಉಳಿದೆಡೆ ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು.

ADVERTISEMENT

ದೇವರ ದರ್ಶನ ಪಡೆದ ಭಕ್ತರು ಸ್ಥಳದಲ್ಲಿಯೇ ಇದ್ದು ರಾತ್ರಿಪೂರ್ತಿ ಜಾಗರಣೆ ವ್ರತದಲ್ಲಿ ಪಾಲ್ಗೊಂಡರು. ಶಿವಪೂಜೆ, ಭಜನೆ, ಕೀರ್ತನೆ ಹಾಡುವುದರ ಮೂಲಕ ಭಕ್ತಿ ಮೆರೆದರು. ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಳಿಗ್ಗೆಯಿಂದೇ ದೇವರಿಗೆ ಅಭಿಷೇಕ, ವಿಶೇಷ ಪೂಜೆ, ರುದ್ರಾಭಿಷೇಕ ಪೂಜೆ ನಡೆದವು. ಬೆಟ್ಟ ಹತ್ತುವ ಭಕ್ತರಿಗೆ ಕೆಲವರು ಹೆಸರುಬೇಳೆ, ಮಜ್ಜಿಗೆ ವಿತರಿಸಿ ದೇವರಿಗೆ ಸೇವೆ ಸಲ್ಲಿಸಿದರು.

ತಾಲ್ಲೂಕಿನ ಪಾಲಾಭೋವಿದೊಡ್ಡಿಯಲ್ಲಿ ಮಹದೇಶ್ವರ ಮತ್ತು ಶನೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರುಗಳ ಮೆರವಣಿಗೆ ನಡೆಯಿತು. ಜಾನಪದ ಕಲಾವಿದರ ಪೂಜಾ ಕುಣಿತ ಹಾಗೂ ವೀರಗಾಸೆ ಕುಣಿತ ಗಮನ ಸೆಳೆಯಿತು. ಅರ್ಚಕ ಶಿವಣ್ಣ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಭಕ್ತರಿಗೆ ಮುದ್ದೆ ಹಾಗೂ ಅವರೆಕಾಳು ಸಾರಿನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮಹಾ ಶಿವರಾತ್ರಿ ಪ್ರಯುಕ್ತ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಸ್ವಾಮಿಗೆ ವಿಶೇಷಾಲಂಕಾರ ಮಾಡಲಾಗಿತ್ತು
ಮಹಾ ಶಿವರಾತ್ರಿ ಪ್ರಯುಕ್ತ ರಾಮನಗರ ಮುಖ್ಯರಸ್ತೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು
ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯಲ್ಲಿ ಮಹದೇಶ್ವರ ಮತ್ತು ಶನೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು. ಜಾನಪದ ಕಲಾವಿದರ ಪೂಜಾ ಕುಣಿತ ಹಾಗೂ ವೀರಗಾಸೆ ಕುಣಿತ ಗಮನ ಸೆಳೆಯಿತು
ಮಹಾ ಶಿವರಾತ್ರಿ ಪ್ರಯುಕ್ತ ರಾಮನಗರದ ಛತ್ರದ ಬೀದಿಯ ಅರ್ಕೇಶ್ವರದ ದೇವಾಲಯದಲ್ಲಿ ದೇವರ ಮೂರ್ತಿಗಳಿಗೆ ವಿಶೇಷಾಲಂಕಾರ ಮಾಡಲಾಗಿತ್ತು
ಮಹಾ ಶಿವರಾತ್ರಿ ಪ್ರಯುಕ್ತ ರಾಮನಗರದ ಛತ್ರದ ಬೀದಿಯ ಅರ್ಕೇಶ್ವರದ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.