ADVERTISEMENT

ಮಹದೇವನ ಚಿಕಿತ್ಸೆಗೆ ಬೇಕು ದಾನಿಗಳ ನೆರವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 13:57 IST
Last Updated 27 ಫೆಬ್ರುವರಿ 2020, 13:57 IST
ಮಹದೇವ
ಮಹದೇವ   

ಬಿಡದಿ: ಸ್ವಾದೀನ ಕಳೆದುಕೊಂಡ ಕಾಲುಗಳು... ಮಲಗಿದ್ದಲ್ಲೇ ಜೀವನ ದೂಡಬೇಕಾದ ದುಃಸ್ಥಿತಿ. ಪ್ರತಿಯೊಂದಕ್ಕೂ ತಂದೆ–ತಾಯಿಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ.

ಇದು ಬಿಡದಿ ಹೋಬಳಿಯ ದೇವಮ್ಮ ಹಾಗೂ ನಂಜುಂಡಪ್ಪನವರ ಪುತ್ರ ಮಹದೇವನ ಪರಿಸ್ಥಿತಿ. ಸದ್ಯ 21 ವರ್ಷದ ಈತ ಹೀಗೆ ಹಾಸಿಗೆಯಲ್ಲೇ ಬದುಕು ಕಳೆಯುತ್ತಿದ್ದಾನೆ. ಪುತ್ರನ ಚಿಕಿತ್ಸೆಗೆಂದು ತಮ್ಮ ಸಂಪಾದನೆಯ ಹಣವೆಲ್ಲವನ್ನೂ ವ್ಯಯಿಸಿರುವ ಕುಟುಂಬವು ಇದೀಗ ಸಾರ್ವಜನಿಕರ ನೆರವಿನ ನಿರೀಕ್ಷೆಯಲ್ಲಿದೆ.

ಮಹದೇವ ಮೂರು ವರ್ಷದ ಬಾಲಕ ಇರುವಾಗ ಆತನಿಗೆ ಸಮಸ್ಯೆ ಕಾಣಿಸಿಕೊಂಡಿತು. ದೇಹದ ಎಡಭಾಗದಲ್ಲಿ ತೊಂದರೆ ಇದೆ. ಆಗಾಗ ಸಮಸ್ಯೆ ಕಾಣಿಸಿಕೊಳ್ಳತೊಡಗಿತು. ಸ್ಪರ್ಶ ಕ್ರಿಯೆಯೂ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಬಾಲ್ಯದಿಂದಲೇ ಹುಡುಗನಿಗೆ ಚಿಕಿತ್ಸೆ ಮುಂದುವರಿದಿತ್ತು.

ADVERTISEMENT

ಹುಡುಗ ತನ್ನ ಆರೋಗ್ಯ ಸಮಸ್ಯೆ ನಡುವೆಯೂ ಬಡತನದ ಕಾರಣ ಅನಿವಾರ್ಯವಾಗಿ ಕೆಲಸಕ್ಕೆ ಸೇರಬೇಕಾಯಿತು. ಆದರೆ ಕೆಲ ವರ್ಷಗಳ ಹಿಂದೆ ಕಾರ್ಖಾನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ತಲೆ ಸುತ್ತಿ ಬಿದ್ದಿದ್ದು, ಕಂಪನಿ ಅವರನ್ನು ಮನೆಗೆ ಸಾಗಿ ಹಾಕಿ ಕೈ ತೊಳೆದುಕೊಂಡಿತು. ಅಲ್ಲಿಂದ ಹುಡುಗನ ಕಾಲುಗಳು ಸ್ವಾದೀನ ಕಳೆದುಕೊಂಡಿವೆ. ಮಲಗಿದ್ದಲ್ಲೇ ಎಲ್ಲವೂ ಆಗಬೇಕಿದೆ.

ಬಡ ಕುಟಂಬ: ಮಹದೇವನ ಕುಟುಂಬ ತಾಯಪ್ಪನದೊಡ್ಡಿಯ ಪುಟ್ಟ ಗುಡಿಸಲಿನಲ್ಲಿ ವಾಸವಿದೆ. ಮಗನ ಚಿಕಿತ್ಸೆಗೆಂದು ಈ ಕುಟಂಬ ತಮ್ಮಲ್ಲಿನ ಜಮೀನನ್ನು ಈಗಾಗಲೇ ಮಾರಾಟ ಮಾಡಿದೆ. ನಿಮ್ಹಾನ್ಸ್‌ ಸಹಿತ ಹಲವು ಆಸ್ಪತ್ರೆಗೆ ಅಲೆದಿದೆ. ಆದರೂ ಆರೋಗ್ಯ ಪರಿಸ್ಥಿತಿ ಹೆಚ್ಚು ಸುಧಾರಿಸಿಲ್ಲ. ದಿನನಿತ್ಯದ ಔಷದದ ಖರ್ಚಿಗೆಂದೇ ₹ 500 ಬೇಕಿದೆ. ಸದ್ಯ ತಂದೆ–ತಾಯಿ ಇಬ್ಬರೂ ಕೂಲಿ ಮಾಡಿ ಮಗನನ್ನು ಸಲಹುತ್ತಿದ್ದಾರೆ. ದಿನದ ಸಂಪಾದನೆಯಲ್ಲೇ ಮಗನ ಆರೈಕೆಗೇ ಖರ್ಚಾಗುವುದಾಗಿ ಅವರು ಹೇಳುತ್ತಾರೆ.

ವೈದ್ಯರು ಸದ್ಯ ಮಹದೇವನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊನೆಯ ಹಂತದ ಚಿಕಿತ್ಸೆಗಾಗಿ ಸುಮಾರು ₹ 20 ಲಕ್ಷದಷ್ಟು ಹಣ ಬೇಕಾಗಬಹುದು ಎಂಬುದು ವೈದ್ಯರ ಅಂದಾಜು. ಇಷ್ಟು ಹಣ ಹೊಂದಿಸುವುದು ಈ ಕುಟುಂಬದಿಂದ ಆಗದ ಮಾತು. ಹೀಗಾಗಿ ದಾನಿಗಳು, ಸಂಘ–ಸಂಸ್ಥೆಗಳು ಚಿಕಿತ್ಸೆಗೆ ನೆರವು ನೀಡಬೇಕು ಎನ್ನುವುದು ಕುಟುಂಬದವರ ಮನವಿ.

ದಾನಿಗಳು ಅವರ ಕುಟುಂಬದವರ ಮೊಬೈಲ್‌ ಸಂಖ್ಯೆ 97396–34378 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.