ADVERTISEMENT

ಚನ್ನಪಟ್ಟಣ: ವಾಲ್ಮೀಕಿ ಸಾರ್ವಕಾಲಿಕ ಶ್ರೇಷ್ಠ ಕವಿ - ತಹಶೀಲ್ದಾರ್ ನಾಗೇಶ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 2:24 IST
Last Updated 1 ನವೆಂಬರ್ 2020, 2:24 IST
ಚನ್ನಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯಿತು
ಚನ್ನಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯಿತು   

ಚನ್ನಪಟ್ಟಣ: ‘ರಾಮಾಯಣ ಮಹಾಕಾವ್ಯ ಬರೆದು ಸಮಾಜಕ್ಕೆ ಮಹತ್ವವಾದ ಸಂದೇಶ ನೀಡಿದ ಮಹಾಕವಿ ವಾಲ್ಮೀಕಿ ಅವರು ಸಾರ್ವಕಾಲಿಕ ಶ್ರೇಷ್ಠ ಕವಿ’ ಎಂದು ತಹಶೀಲ್ದಾರ್ ನಾಗೇಶ್ ಬಣ್ಣಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಎಂತಹ ಕಟುಕ ಕೂಡ ಉತ್ತಮ ಮಾರ್ಗದರ್ಶನ ಲಭಿಸಿದರೆ ಮನಪರಿವರ್ತನೆಯಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಾನೆ ಎಂಬುದಕ್ಕೆ ವಾಲ್ಮೀಕಿ ಅವರೇ ಸಾಕ್ಷಿಯಾಗಿದ್ದಾರೆ. ಬೇಟೆಗಾರನಾಗಿ ಪ್ರಯಾಣಿಕರನ್ನು ದರೋಡೆ ಮಾಡಿಕೊಂಡು ಸಮಾಜ ಕಂಟಕರಾಗಿದ್ದ ವಾಲ್ಮೀಕಿ ಅವರ ಜೀವನವನ್ನು ನಾರದ ಮುನಿಗಳು ಬದಲಾಯಿಸಿದರು. ಆ ಮೂಲಕ ಪ್ರಪಂಚದ ಶ್ರೇಷ್ಠ ಕಾವ್ಯ ರಚಿಸಲು ಕಾರಣರಾದರು’ ಎಂದರು.

ADVERTISEMENT

ದಲಿತ ಮುಖಂಡ ಕೋಟೆ ಸಿದ್ದರಾಮಯ್ಯ ಮಾತನಾಡಿ, ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಆಗ ಮಾತ್ರ ಕಾರ್ಯಕ್ರಮಗಳಿಗೆ ಶೋಭೆ ಬರುತ್ತದೆ. ಕೆಲವೇ ಮಂದಿ ಹಾಜರಾಗುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಸರೋಜಮ್ಮ, ಶಿಕ್ಷಣ ಇಲಾಖೆಯ ಶಿವಣ್ಣ, ಶಿಕ್ಷಣ ಸಂಯೋಜಕರಾದ ಗಂಗಾಧರ್, ಪ್ರಶಾಂತ್, ಮುಖಂಡರಾದ ವಂದಾರಗುಪ್ಪೆ ರಾಜೇಶ್, ನೀಲಸಂದ್ರ ಸದಾನಂದ, ಅಪ್ಪಗೆರೆ ಶ್ರೀನಿವಾಸ್, ವೆಂಕಟೇಶ್, ಚಕ್ಕಲೂರು ಚೌಡಯ್ಯ, ಕೆಂಚೇಗೌಡ, ಜಯರಾಮು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.