ADVERTISEMENT

ಪ್ರಿಯತಮೆ, ಮಗು ಹತ್ಯೆ: ಆರೋಪಿ ಬಂಧನ

ಫೇಸ್‌ಬುಕ್‌ನಲ್ಲಿ ಪರಿಚಯದಿಂದ ಪ್ರೇಮ: ಒಟ್ಟಿಗೆ ವಾಸವಿದ್ದ ಜೋಡಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 16:29 IST
Last Updated 30 ಜನವರಿ 2019, 16:29 IST
ಆರೋಪಿ ರಾಜು ಹಾಗೂ ಹತ್ಯೆಗೀಡಾದ ಸುಷ್ಮಾ
ಆರೋಪಿ ರಾಜು ಹಾಗೂ ಹತ್ಯೆಗೀಡಾದ ಸುಷ್ಮಾ   

ಬಿಡದಿ (ರಾಮನಗರ): ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುತ್ತಾಳೆ ಎಂಬ ಸಿಟ್ಟಿನಿಂದ ತನ್ನ ಪ್ರಿಯತಮೆ ಮತ್ತು ಹಸುಗೂಸನ್ನು ಕೊಂದ ಪ್ರಿಯಕರನನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯ್ಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸುಷ್ಮಾ (25) ಹತ್ಯೆಗೀಡಾದವರು. ಬೆಂಗಳೂರು ನಿವಾಸಿ ಎಸ್‌.ಕೆ. ರಾಜು (28) ಬಂಧಿತ ಆರೋಪಿ.

ಬಿಡದಿ ಹೋಬಳಿಯ ಹೆಜ್ಜಾಲ–ಮುತ್ತುರಾಯನಪುರ ರಸ್ತೆಯಲ್ಲಿರುವ ಕುಂಬಳಗೂಡು ಅರಣ್ಯ ಪ್ರದೇಶದ ನೀಲಗಿರಿ ತೋಪಿನಲ್ಲಿ ಇದೇ ತಿಂಗಳ 20ರಂದು ಅರೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆಯಾಗಿತ್ತು. ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಭರ್ಬರವಾಗಿ ಹತ್ಯೆ ಮಾಡಿ ದೇಹದ ಮೇಲೆ ಪೆಟ್ರೋಲ್ ಸುರಿದು ಸುಡಲಾಗಿತ್ತು.

ADVERTISEMENT

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಗುರುತು ಪತ್ತೆ ಪ್ರಯತ್ನದಲ್ಲಿದ್ದ ಸಂದರ್ಭ ಮಾದನಾಯ್ಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಮಗು ನಾಪತ್ತೆಯಾದ ಸುದ್ದಿ ತಿಳಿದು ಆಕೆಯ ಪೋಷಕರನ್ನು ಸ್ಥಳಕ್ಕೆ ಕರೆತಂದಿದ್ದರು. ಸ್ಥಳದಲ್ಲಿ ಸಿಕ್ಕ ವಸ್ತು ಹಾಗೂ ಬಟ್ಟೆಗಳ ಆಧಾರದ ಮೇಲೆ ಪೋಷಕರು ಇದು ತಮ್ಮ ಮಗಳದ್ದೇ ದೇಹ ಎಂದು ಗುರುತಿಸಿದ್ದರು. ಅವರ ಹೇಳಿಕೆ ಮತ್ತು ಅನುಮಾನಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

ಫೇಸ್‌ಬುಕ್‌ನಲ್ಲಿ ಪರಿಚಯ, ಲಿವ್‌ ಇನ್‌ ಸಂಬಂಧ: ಆರೋಪಿ ರಾಜು ಹಾಗೂ ಸುಷ್ಮಾ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿದ್ದರು. ನಂತರದಲ್ಲಿ ಈ ಸಂಬಂಧ ಪ್ರೀತಿಗೆ ತಿರುಗಿದ್ದು, ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಇವರಿಗೆ ಗಂಡು ಮಗು ಜನಿಸಿತ್ತು.

‘ಮಗು ಜನಿಸಿದ ನಂತರವೂ ಸುಷ್ಮಾ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದರು. ಮನೆಯ ಕೆಲಸವನ್ನು ಮಾಡುತ್ತಿರಲಿಲ್ಲ. ಇಬ್ಬರ ನಡುವೆ ಜಗಳ ಆಗುತ್ತಿತ್ತು. ಇದರಿಂದ ಬೇಸತ್ತ ಆರೋಪಿ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದ. ಇದೇ 19ರಂದು ಸಂಜೆ 5.30ರ ಸುಮಾರಿಗೆ ತಾಯಿ ಹಾಗೂ ಮಗುವನ್ನು ಬೈಕ್‌ನಲ್ಲಿ ಕುಂಬಳಗೂಡು ಅರಣ್ಯ ಪ್ರದೇಶಕ್ಕೆ ಕರೆತಂದಿದ್ದ. ಕಲ್ಲಿನಿಂದ ಸುಷ್ಮಾರ ತಲೆಗೆ ಹೊಡೆದು ಹತ್ಯೆ ಮಾಡಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ. ನಂತರ ಮೂರು ತಿಂಗಳ ಮಗುವಿನ ಕುತ್ತಿಗೆ ಹಿಚುಕಿ ಸಾಯಿಸಿ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಹೀಗೆಂದು ಆರೋಪಿಯು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಎಸ್ಪಿ ಬಿ. ರಮೇಶ್‌, ಡಿವೈಎಸ್‌ಪಿಪುರುಷೋತ್ತಮ್‌ ಮಾರ್ಗದರ್ಶನದಲ್ಲಿ ರಾಮನಗರ ಗ್ರಾಮೀಣ ಸಿಪಿಐ ಕೆ. ಜೀವನ್, ಬಿಡದಿ ಎಸ್‌ಐ ಹರೀಶ್‌ ಹಾಗೂ ಸಿಬ್ಬಂದಿ ಆರೋಪಿ ಪತ್ತೆಗೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.