ರಾಮನಗರ: ಮಾವಿನ ಋತು ಶುರುವಾಗಿ ಮಾರುಕಟ್ಟೆಯಲ್ಲಿ ಹಣ್ಣಿನ ಘಮಲು ಮೂಗಿಗೆ ಬಡಿಯುವ ಹೊತ್ತಿನಲ್ಲೇ ಮಾವಿನ ಕಾಯಿಗಳಲ್ಲಿ ಜೋನಿ ರೋಗ ಕಾಣಿಸಿಕೊಂಡಿದೆ. ತಿಂಗಳಿಂದ ಶುರುವಾಗಿರುವ ಬಿಸಿಲು ಮತ್ತು ಮಳೆಯಾಟದ ನಡುವೆಯೇ ಬಂದಿರುವ ರೋಗವು, ಈ ಸಲವೂ ಮಾವು ಬೆಳೆಗಾರರನ್ನು ನಷ್ಟದ ಕೂಪಕ್ಕೆ ದೂಡಿದೆ.
ಅಕಾಲಿಕ ಮಳೆ–ಗಾಳಿಯಿಂದಾಗಿ ನೆಲ ಕಚ್ಚುತ್ತಿರುವ ಮಾವಿನ ಕಾಯಿಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಪರದಾಡುತ್ತಿದ್ದರು. ಮಳೆಯಿಂದಾಗಿ ಮರಗಳಲ್ಲಿ ಚಿಗುರು ಶುರುವಾಗಿ ಹೂ ಸಹ ಬಿಡತೊಡಗಿತ್ತು. ಇದೀಗ ಕಾಯಿಗಳಲ್ಲಿ ಜೋನಿ ಕಾಣಿಸಿಕೊಂಡು ಮರದಲ್ಲೇ ಕೊಳೆಯತೊಡಗಿವೆ. ಕಾಯಿಯಿಂದ ಕಾಯಿಗೆ, ಮರದಿಂದ ಮರಕ್ಕೆ ವೇಗವಾಗಿ ಹರಡುತ್ತಿರುವ ರೋಗದಿಂದಾಗಿ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.
ಗಾಯದ ಮೇಲೆ ಬರೆ: ‘ಗಾಯದ ಮೇಲೆ ಬರೆ ಎಳೆದಂತೆ ಜೋನಿ ರೋಗ ಕಾಣಿಸಿಕೊಂಡಿದೆ. ಕೆಲವರು ಬಲಿತ ಕಾಯಿಗಳ ಕೊಯ್ಲು ಮಾಡುತ್ತಿದ್ದಾರೆ. ಹಲವೆಡೆ ಇನ್ನೂ ಬಲಿತಿಲ್ಲ. ಅಂತಹ ಕಾಯಿಗಳಿಗೆ ಜೋನಿ ಕಾಟ ಶುರುವಾಗಿದೆ’ ಎಂದು ಬೆಳೆಗಾರ ಆದರ್ಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಮನಗರ ಜಿಲ್ಲೆಯ ಮಾವು ಮಂಡಿ ಹಾಗೂ ಮಾರುಕಟ್ಟೆ ಪ್ರವೇಶಿಸುವ ಮೂಲಕ, ರಾಜ್ಯದಲ್ಲಿ ಮಾವಿನ ಋತು ಶುರುವಾಗುತ್ತದೆ. ಆಗಾಗ ಬಿದ್ದ ಅಕಾಲಿಕ ಮಳೆಯಿಂದಾಗಿ ಮರಗಳಲ್ಲಿ ಹೂವು ಬಿಟ್ಟಿದೆ. ಇದರ ಜೊತೆಗೆ ಕಾಣಿಸಿಕೊಂಡಿರುವ ಜೋನಿಯು, ಈ ಸಲ ಮಾವಿನ ಇಳುವರಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹಾಕಿದ ಬಂಡವಾಳವೂ ಕೈ ಸೇರದ ಪರಿಸ್ಥಿತಿ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
2 ಹಂತದಲ್ಲಿ ಹೂವು: ಅಕಾಲಿಕ ಮಳೆ–ಬಿಸಿಲಿನ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಮರಗಳಲ್ಲಿ ಈ ಸಲ ಎರಡು ಹಂತದಲ್ಲಿ ಹೂ ಬಿಟ್ಟಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬಿಟ್ಟಿದ್ದ ಹೂವು ಫಸಲಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ತಡವಾಗಿ ಸುರಿದ ಮಳೆಗೆ ಕಾಣಿಸಿಕೊಂಡಿದ್ದ ಹೂವು ನೆಲ ಕಚ್ಚಿದೆ.
ಅದರ ಬೆನ್ನಲ್ಲೇ ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡಿದ್ದರಿಂದ ಕೀಟಬಾಧೆಗಳು ಹೆಚ್ಚಾಗಿದೆ. ಮೊದಲ ಹಂತದಲ್ಲಿ ಹೂವಿನಲ್ಲಿ ಕಚ್ಚಿದ ಕಾಯಿಗೆ ಯಾವುದೇ ರೋಗ ಇರಲಿಲ್ಲವಾದರೂ, ಎರಡನೇ ಹಂತದಲ್ಲಿ ಕಾಣಿಸಿಕೊಂಡ ಹೂವಿನಲ್ಲಿ ಕಚ್ಚಿದ ಕಾಯಿಗೆ ಕೀಟಬಾಧೆ ಶುರುವಾಗಿದೆ. ಮಾವಿನಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯತೊಡಗಿವೆ. ಇದರಿಂದಾಗಿ ಮಾವು ಬೆಳೆದವರು ಕಂಗಾಲಾಗಿದ್ದಾರೆ ಎಂದು ಬೆಳೆಗಾರರು ಅಳಲು ತೋಡಿಕೊಂಡರು.
ಮಳೆ ಬಂದು ಮರದಲ್ಲಿ ಚಿಗುರು ಶುರುವಾಗುತ್ತಿದ್ದಂತೆ ಜೋನಿ ಶುರುವಾಗಿದೆ. ಕಾಯಿಗಳು ಕೊಯ್ಲಿಗೆ ಬಂದಿರುವ ಹಂತದಲ್ಲಿ ಔಷಧ ಸಿಂಪಡಣೆಯೂ ಸೂಕ್ತವಲ್ಲ. ರೋಗ ಹರಡದಂತೆ ಬೆಳೆಗಾರರು ಜೋನಿ ಬಾಧಿತ ಕಾಯಿಗಳನ್ನು ನಾಶಪಡಿಸಬೇಕು. ಬಲಿತ ಕಾಯಿಗಳನ್ನು ಬೇಗನೆ ಕೊಯ್ಲು ಮಾಡಬೇಕುರಾಜು ಎಂ.ಎಸ್. ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ
ಈ ಸಲವೂ ಕೈ ಕೊಟ್ಟ ಮಾವು
ಹಿಂದೆ ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಮಾವು ಸಂಪೂರ್ಣ ನೆಲ ಕಚ್ಚಿತ್ತು. ಈ ಸಲ ಮಳೆ ಮತ್ತು ಬಿಸಿಲಿನಾಟದ ಜೊತೆಗೆ ಜೋನಿ ರೋಗ ಸಿಡಿಲಿನಂತೆ ಬಂದೆರಗಿದೆ. ಸದ್ಯ ಜಿಲ್ಲೆಯಲ್ಲಿ ಶೇ 25ರಿಂದ 30ರಷ್ಟು ಮಾತ್ರ ಫಸಲು ಇದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಫಸಲು ಇದೆ. ಮಾಗಡಿ ಜಾಲಮಂಗಲ ಕೂಟಗಲ್ ತಡಿಕವಾಗಿಲು ಅಕ್ಕೂರು ಮಾಗಡಿ ಭಾಗದಲ್ಲಿ ಜೋನಿ ರೋಗ ಕಾಣಿಸಿಕೊಳ್ಳತೊಡಗಿದೆ. ಇತ್ತೀಚೆಗೆ ಜೋರಾಗಿರುವ ಗಾಳಿ–ಮಳೆಗೆ ಕಾಯಿಗಳು ಸಹ ಉದುರುತ್ತಿವೆ. ಒಟ್ಟಿನಲ್ಲಿ ಈ ಸಲವೂ ಮಾವು ಬೆಳೆಗಾರರಿಗೆ ಕೈ ಕೊಟ್ಟಿದ್ದು ರೈತರನ್ನು ನಷ್ಟಕ್ಕೆ ದೂಡಿದೆ ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್. ಚಿಕ್ಕ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಕೊಳೆಯುತ್ತಿರುವ ಕಾಯಿ; ಕೊಯ್ಲಿನತ್ತ ರೈತರ ಚಿತ್ತ
ಜಿಲ್ಲೆಯಲ್ಲಿ ಬೆಳೆಯುವ ಸೇಂದುರಾ ಬಾದಾಮಿ ತೋತಾಪುರಿ ಸೇರಿದಂತೆ ಎಲ್ಲಾ ಜಾತಿಯ ಮಾವಿನ ಕಾಯಿಗಳಲ್ಲೂ ಜೋನಿ ರೋಗ ಕಾಣಿಸಿಕೊಂಡಿದೆ. ಕೊಯ್ಲಿಗೆ ಬಂದಿರುವ ಹಂತದಲ್ಲಿ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಬೆಳೆಗಾರರು ಸಿಲುಕಿದ್ದಾರೆ. ಒಂದು ವೇಳೆ ಬೇವಿನ ಎಣ್ಣೆ ಸೇರಿದಂತೆ ಇತರ ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರಲು ಹೆಚ್ಚು ಸಮಯ ಬೇಕಾಗುತ್ತದೆ. ಅಷ್ಟೊತ್ತಿಗೆ ರೋಗವು ಇಡೀ ತೋಟವನ್ನು ವ್ಯಾಪಿಸುವ ಆತಂಕವಿದೆ. ಹಾಗಾಗಿ ಕೆಲ ರೈತರು ಬಲಿತ ಕಾಯಿಗಳ ಜೊತೆಗೆ ಇನ್ನೂ ಅಷ್ಟಾಗಿ ಬಲಿಯದ ಕಾಯಿಗಳನ್ನು ಸಹ ಕೊಯ್ಲು ಮಾಡಿ ಮಂಡಿಗೆ ತರುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಮಾವಿಗೆ ಉತ್ತಮ ಬೆಲೆ ಇದೆ. ಆದರೆ ಬಲಿಯದ ಕಾಯಿಗಳನ್ನು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.