ADVERTISEMENT

ಮರುಳಸಿದ್ಧೇಶ್ವರ ದೇವಸ್ಥಾನ ಉದ್ಘಾಟನೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 13:30 IST
Last Updated 8 ನವೆಂಬರ್ 2019, 13:30 IST
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟಿನ ಉಪಾಧ್ಯಕ್ಷ ಎಚ್.ಸಿ. ರಾಜಣ್ಣ ಮಾತನಾಡಿದರು
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟಿನ ಉಪಾಧ್ಯಕ್ಷ ಎಚ್.ಸಿ. ರಾಜಣ್ಣ ಮಾತನಾಡಿದರು   

ರಾಮನಗರ: ಕೈಲಾಂಚ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ಶ್ರೀ ವಿಘ್ನೇಶ್ವರ, ಶ್ರೀ ಮರುಳಸಿದ್ಧೇಶ್ವರ ಮತ್ತು ಶ್ರೀ ಅನ್ನಪೂರ್ಣೆಶ್ವರಿ ದೇವರ ನೂತನ ವಿಗ್ರಹಗಳ ಪ್ರತಿಷ್ಠಾಪನೆ, ವಿಮಾನ ಗೋಪುರ, ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇದೇ 9 ರಿಂದ 11 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಅಭಿವೃದ್ಧಿ ಸೇವಾ ಟ್ರಸ್ಟಿನ ಉಪಾಧ್ಯಕ್ಷ ಎಚ್.ಸಿ. ರಾಜಣ್ಣ ಹೇಳಿದರು.

ಹುಲಿಕೆರೆ ಗ್ರಾಮದ ನೂತನ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದೇ 9 ರಂದು ಬೆಳಿಗ್ಗೆ ಮಹಾ ಗಣಪತಿ ಪೂಜೆ ರಾಕ್ಷೋಘ್ನ ಹೋಮ, 10 ರಂದು ವೇದ ಪಾರಾಯಣದೊಂದಿಗೆ ನವಗ್ರಹ ಪೂಜೆ, ನೂತನ ಶಿಲಾ ವಿಗ್ರಹಗಳಿಗೆ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಧಿವಾಸ, ಕ್ಷೀರಾಧಿವಾಸ, ವಿಗ್ರಹ ಸಂಸ್ಕಾರ, ಶಿಖರ ಕಳಸ ಸ್ಥಾಪನೆ, ನವದುರ್ಗ ಕಳಸ ಸ್ಥಾಪನೆ, ಅಷ್ಟಲಕ್ಷ್ಮೀ ಪೂಜೆ, ಮಹಾಮಂಗಳಾರತಿ, ಲಘು ಪೂರ್ಣಾಹುತಿ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದರು.

11 ರಂದು ಬೆಳಿಗ್ಗೆ 5 ರಿಂದ 6-10 ಘಂಟೆವರೆಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ, ನಾಡಿ ಸಂಧಾನ, ಕಲಾಹೋಮ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ದೇನುದರ್ಶನ, ದೀಪದರ್ಶನ, ಕುಂಭಾಭಿಷೇಕ ಮಹಾಮಂಗಳಾರತಿ, ವಿಶೇಷ ರಾಜೋಪಚಾರ ಪೂಜೆ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ದೊಡ್ಡಸಿನಕೆರೆ ಬಸವನ ಪೂಜೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಹಿರಿಯ ಮುಖಂಡ ಕೆ. ರಾಜು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಎಚ್.ಟಿ. ಬೆಟ್ಟೇಗೌಡ, ಅಧ್ಯಕ್ಷ ಎಚ್.ಎಸ್. ದೇವರಾಜು, ಕಾರ್ಯದರ್ಶಿ ಎಚ್.ವಿ. ಶ್ರೀನಿವಾಸಮೂರ್ತಿ, ಖಜಾಂಚಿ ಎಚ್.ಕೆ. ವೆಂಕಟೇಶ್, ಸದಸ್ಯರಾದ ಎಚ್.ಎಸ್. ವೆಂಕಟೇಶ್, ನರಸಿಂಹಮೂರ್ತಿ, ಪ್ರಭು, ಪುಟ್ಟಮಾದಯ್ಯ, ಎಚ್.ಆರ್. ಚಂದ್ರಶೇಖರ್, ಎಚ್.ಎಂ. ಲಿಂಗರಾಜೇಗೌಡ, ನಾರಾಯಣಪ್ಪ, ರುದ್ರಯ್ಯ, ಎಚ್.ಎಸ್. ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.