ADVERTISEMENT

ಅಭಿವೃದ್ಧಿಯಲ್ಲಿ ಮಠ –ಮಾನ್ಯಗಳ ಪಾತ್ರ ಪ್ರಮುಖ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 13:15 IST
Last Updated 7 ಡಿಸೆಂಬರ್ 2019, 13:15 IST
ಮರಳೆಗವಿಮಠದಲ್ಲಿ ನಡೆದ ಸ್ವಾಮೀಜಿ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು
ಮರಳೆಗವಿಮಠದಲ್ಲಿ ನಡೆದ ಸ್ವಾಮೀಜಿ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು   

ಉಯ್ಯಂಬಳ್ಳಿ (ಕನಕಪುರ): ಸಮಾಜದ ಗುರುವಾಗಿ ಶ್ರೀಮಠ ಕೆಲಸ ಮಾಡಿದೆ. ಸಮಾಜ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುವ ಕೆಲಸ ಮಠಾಧೀಶರು ಮಾಡಿದ್ದಾರೆ ಎಂದು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ್‌ ಜೋಷಿ ಹೇಳಿದರು.

ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಮರಳೆಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ 46ನೇ ಜನ್ಮದಿನೋತ್ಸವ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಭಿವೃದ್ಧಿಯಲ್ಲಿ ಮಠ –ಮಾನ್ಯಗಳ ಪಾತ್ರ ಪ್ರಮುಖವಾದುದು. ಮಠಗಳು ಎಲ್ಲ ರೀತಿಯ ದಾಸೋಹ ಮೂಲಕ ಸಮಾಜವನ್ನು ಮುನ್ನಡೆಸಿಕೊಂಡು ಬಂದಿವೆ. ಇಲ್ಲಿನ ಗವಿಮಠವೂ ಅದೇ ಸಂಪ್ರದಾಯದೊಂದಿಗೆ ತ್ರಿವಿಧ ದಾಸೋಹದ ಮೂಲಕ ತಾಲ್ಲೂಕಿನ ಜನರು ಸೌಹಾರ್ದ ಹಾದಿಯಲ್ಲಿ ಸಾಗಲು ನೆರವಾಗಿದೆ ಎಂದರು.

ADVERTISEMENT

ಕೈಗಾರಿಕೋದ್ಯಮಿ ಮಲ್ಲಿಕಾರ್ಜುನ್‌ ಎಸ್‌.ಬೊಮ್ಮಾಯಿ ಮಾತನಾಡಿ, ಶ್ರೀಗಳು ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡಿದ್ದಾರೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಮಠಗಳು ಮಾಡಿವೆ. ಮಠಾಧೀಶರು ಸಮಾಜ ಕಟ್ಟುವ ಕಾಯಕದಲ್ಲೇ ಕೈಲಾಸ ಕಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರಾಜಶೇಖರ ಮುಲಾಲಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಎಲ್ಲವೂ ಕಲುಷಿತಗೊಂಡಿದೆ. ಉತ್ತಮ ಸಮಾಜ ನಿರ್ಮಾಣ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿಷಾದಿಸಿದರು.

ಮರಳೆಗವಿಮಠದ ಮುಮ್ಮಡಿ ಶಿವರುದ್ರಸ್ವಾಮಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಮಠಗಳ ಜವಾಬ್ದಾರಿ ಇನ್ನು ಮುಗಿದಿಲ್ಲ. ಮಠ ಪದ್ಧತಿ ಅನುರಿಸಬೇಕಾಗಿದೆ. ಧರ್ಮ, ಜಾತಿ ತಾರತಮ್ಮ ದೂರ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾಜ ಸೇವಕ ಬಿ.ವಿ.ಚಂದ್ರಶೇಖರಯ್ಯ, ಬೆಂಗಳೂರು ಎಂ.ಬಿ.ಶಿವಪ್ಪ, ಕರ್ನಾಟಕ ಐಪಿಯುಎಚ್‌ಸಿಎಲ್‌ ಸದಸ್ಯ ಎನ್‌.ನಾಗೇಶ್‌, ಮಠದ ಭಕ್ತರು, ಮಠದ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.