ADVERTISEMENT

ಮೆಗಾ ಲೋಕ ಅದಾಲತ್‌ ಡಿ.19ರಂದು

ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 14:48 IST
Last Updated 10 ನವೆಂಬರ್ 2020, 14:48 IST
ಬಿ. ರಮಾ
ಬಿ. ರಮಾ   

ರಾಮನಗರ: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು ಡಿಸೆಂಬರ್ 19 ರಂದು ನಡೆಯುವ ಮೆಗಾ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಬಿ. ಜಿ. ರಮಾ ತಿಳಿಸಿದರು.

ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್ ಅನುಷ್ಠಾನ ಕುರಿತು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. "ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ 18 ನ್ಯಾಯಪೀಠಗಳಲ್ಲಿ ಲೋಕ ಅದಾಲತ್ ಅನ್ನು ಆಯೋಜಿಸಲಾಗಿದೆ. ಈ ಅದಾಲತ್‌ಗೆ ಡಿ. 18 ವರೆಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. 19ರಂದು ಏಕಕಾಲಕ್ಕೆ ಮೆಗಾ ಲೋಕ ಅದಾಲತ್ ನಡೆಸಲಾಗುವುದು. ರಾಮನಗರ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಕ್ಷಿದಾರರನ್ನು ಹೊರತು ಪಡಿಸಿದರೆ, ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಹುದು ಇಲ್ಲವೆ ಆನ್ ಲೈನ್ ಮೂಲಕವೂ ಭಾಗವಹಿಸಬಹುದು. ಅವಶ್ಯಕತೆ ಕಂಡು ಬಂದಲ್ಲಿ ಕಕ್ಷಿದಾರರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಲಾಗುವುದು" ಎಂದು ತಿಳಿಸಿದರು.

ಪ್ರಕರಣಗಳು: ಜಿಲ್ಲೆಯಲ್ಲಿ ಒಟ್ಟು 42,704 ಪ್ರಕರಣಗಳು ಬಾಕಿ ಇದ್ದು, ಇವುಗಳ ಪೈಕಿ 2,805 ಪ್ರಕರಣಗಳನ್ನು ಮೆಗಾ ಲೋಕ ಅದಾಲತ್ ನಲ್ಲಿ ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾ. ಬಿ. ವೆಂಕಟಪ್ಪ ತಿಳಿಸಿದರು.

ADVERTISEMENT

ರಾಜಿಗೆ ಒತ್ತು: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಅಪಘಾತ, ಕಂತು ಕಟ್ಟದಿರುವುದು, ಪರಿಹಾರ ವ್ಯಾಜ್ಯ, ಆಸ್ತಿ ಸಂಬಂಧಿತ, ಕೌಟುಂಬಿಕ ಪ್ರಕರಣ, ವಿಮೆ, ಹಣಕಾಸು ವ್ಯಾಜ್ಯ, ಸಣ್ಣ ಪುಟ್ಟ ಸಿವಿಲ್ ವ್ಯಾಜ್ಯ, ಲೇವಾದೇವಿ, ಬಾಡಿಗೆ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ ಸಂಬಂಧಿತ ಪ್ರಕರಣಗಳನ್ನು ರಾಜಿಗಾಗಿ ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲೋಕ ಅದಾಲತ್ ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ್ಯಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಡಿ. 19ರಂದು ಆನ್ ಲೈನ್ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ನ್ಯಾಯಾಲಯಕ್ಕೆ ಬರದೇ ಒಂದೇ ಒಂದು ಬಾರಿಗೆ ನ್ಯಾಯಸಮ್ಮತವಾಗಿ ರಾಜಿ ಇಲ್ಲವೆ ಸಂಧಾನದ ಮೂಲಕ ಇವುಗಳನ್ನು ಹೆಚ್ಚಿನ ಶುಲ್ಕವಿಲ್ಲದೆ ಎರಡೂ ಕಡೆಯವರು ಆನ್ ಲೈನ್ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.