ADVERTISEMENT

ಸಭೆಯಿಂದ ಹೊರನಡೆದ ಸದಸ್ಯರು

ಬೇವೂರು ಗ್ರಾ.ಪಂ: ದಾಖಲೆ ನೀಡದ ಪಿಡಿಒ ಮೇಲೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:09 IST
Last Updated 7 ಜುಲೈ 2021, 10:09 IST
ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾ.ಪಂ. ಸಾಮಾನ್ಯಸಭೆ ಅಧ್ಯಕ್ಷ ಬಿ.ವಿ.ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು
ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾ.ಪಂ. ಸಾಮಾನ್ಯಸಭೆ ಅಧ್ಯಕ್ಷ ಬಿ.ವಿ.ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು   

ಚನ್ನಪಟ್ಟಣ: ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿ.ಡಿ.ಒ. ಸಭೆಗೆ ಸರಿಯಾಗಿ ದಾಖಲೆಗಳನ್ನು ಒದಗಿಸಲು ವಿಫಲರಾದ ಕಾರಣ ಕುಪಿತಗೊಂಡ ಏಳು ಸದಸ್ಯರು ತಾಲ್ಲೂಕಿನ ಬೇವೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಿಂದ ಮಂಗಳವಾರ ಹೊರನಡೆದರು.

ಅಧ್ಯಕ್ಷ ಬಿ.ವಿ.ರಮೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸರ್ಕಾರಿ ಸುತ್ತೋಲೆಗಳು, ಜಿ.ಪಂ. ತಾ.ಪಂ. ನಿಂದ ಬಂದಿರುವ ಪತ್ರಗಳು, ಜಮಾ ಖರ್ಚು ವಿವರ, ಇ ಸ್ವತ್ತು, ಕಂದಾಯ ವಸೂಲಾತಿ, ವಾಟರ್ ಮೆನ್ ಗಳ ಕಾರ್ಯನಿರ್ವಹಣೆ, 2020-21ನೇ ಸಾಲಿನ 15ನೇ ಹಣಕಾಸು ಯೋಜನೆ ಬದಲಾವಣೆ, 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರು ಸೇರಿದಂತೆ ಒಟ್ಟು 11 ವಿಷಯಗಳನ್ನು ಚರ್ಚಿಸಲು ಸಾಮಾನ್ಯ ಸಭೆ ಕರೆಯಲಾಗಿತ್ತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ 7 ಮಂದಿ ಸದಸ್ಯರು ಎದ್ದುನಿಂತು, ‘ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಅವರು ಪಕ್ಷಪಾತ ಮಾಡುತ್ತಿದ್ದಾರೆ. ಹಾಗೆಯೆ ಅವರ ಆಡಳಿತ ವೈಖರಿ ಸಮರ್ಪಕವಾಗಿಲ್ಲ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಸಭೆ ಪ್ರಾರಂಭದಲ್ಲಿಯೆ ಗೊಂದಲಮಯವಾಯಿತು.

ADVERTISEMENT

ನಂತರ ಜಮಾ-ಖರ್ಚು ವಿಚಾರ ಪ್ರಸ್ತಾಪಕ್ಕೆ ಬಂದಾಗ, ಸದಸ್ಯರು ಯಾವ ಯಾವ ಮೂಲದಿಂದ ಎಷ್ಟೆಷ್ಟು ಹಣ ಬಂದಿದೆ. ಯಾವ ಯಾವ ಬಾಬ್ತಿಗೆ ಖರ್ಚು ಮಾಡಲಾಗಿದೆ. ದಾಖಲೆ ಸಮೇತ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಬಿ.ವಿ.ರಮೇಶ್ ಮತ್ತು ಪಿಡಿಒ ಹರ್ಷಗೌಡ ಇದಕ್ಕೆ ಸಮರ್ಪಕ ಉತ್ತರ ಕೊಡಲು ವಿಫಲರಾದರು. ಮಾಹಿತಿ ಕೇಳಿದಾಗ,
ಕಡತದಲ್ಲಿದೆ, ಜೆರಾಕ್ಸ್ ಮಾಡಿಸಿ ಕೊಡುತ್ತೇವೆ ಎಂದು ಸಬೂಬು ಹೇಳಿದಾಗ ಸಭೆಗೆ ಸರಿಯಾದ ದಾಖಲೆ ಮಾಹಿತಿಗಳೊಂದಿಗೆ ಬರಬೇಕು. ಸದಸ್ಯರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಸಭೆ ಕರೆದು ನಮ್ಮ ಸಮಯ ಹಾಳಿಮಾಡಬೇಡಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ 7 ಮಂದಿ ಸದಸ್ಯರು ಸಭೆಯಿಂದ ಹೊರಬಂದರು.

‘ಅಧ್ಯಕ್ಷರಿಗೆ ಆಡಳಿತ ನಡೆಸುವ ಸ್ವಂತ ಶಕ್ತಿ ಇಲ್ಲ. ಪ್ರತಿಯೊಂದಕ್ಕೂ ತಮ್ಮನ್ನು ಬೆಂಬಲಿಸಿದ ನಾಯಕರನ್ನು ಕೇಳಿಕೊಂಡು ಕೆಲಸ ಮಾಡುತ್ತಾರೆ, ತಮ್ಮ ಬೆಂಬಲಿಗರಿಗೆ ಮಾತ್ರ ಪಂಚಾಯಿತಿ ಕೆಲಸ ಕಾರ್ಯಗಳನ್ನು ನೀಡುತ್ತಾರೆ, ವಿರೋಧ ಪಕ್ಷದವರನ್ನು ನಿರ್ಲಕ್ಷ್ಯ ಮಾಡುತ್ತಾ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಆಗುತ್ತಿಲ್ಲ’ ಎಂದು ಸಭೆಯಿಂದ ಹೊರಬಂದ ಸದಸ್ಯರಾದ ಲತಾಮಣಿ, ಸುಶೀಲಮ್ಮ, ವೆಂಕಟಸ್ವಾಮಿ, ಸಾಕಮ್ಮ, ಶಿವರತ್ನಮ್ಮ, ಭಜ್ಜಯ್ಯ, ಜಯಲಕ್ಷ್ಮಮ್ಮ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.