ADVERTISEMENT

ಒತ್ತಡ ನಿರ್ವಹಣೆಯಿಂದ ಆತ್ಮಹತ್ಯೆ ಯೋಚನೆ ದೂರ: ಡಾ. ಪ್ರತಿಮಾ ಮೂರ್ತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:20 IST
Last Updated 15 ಸೆಪ್ಟೆಂಬರ್ 2025, 2:20 IST
<div class="paragraphs"><p>ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ರಾಮನಗರದ ಕಂದಾಯ ಭವನದಲ್ಲಿ ನಿಮ್ಹಾನ್ಸ್‌ನ ‘ಸುರಕ್ಷಾ ಪ್ರಾಜೆಕ್ಟ್’ ವತಿಯಿಂದ ಹಮ್ಮಿಕೊಂಡಿದ್ದ ‘ಮನೋಸಂಗಮ 2.0’ ಕಾರ್ಯಕ್ರಮವನ್ನು ನಿಮ್ಹಾನ್ಸ್‌ ನಿರ್ದೇಶಕಿ‌‌ ಡಾ. ಪ್ರತಿಮಾ ಮೂರ್ತಿ ಉದ್ಘಾಟಿಸಿದರು.&nbsp;&nbsp;</p></div>

ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ರಾಮನಗರದ ಕಂದಾಯ ಭವನದಲ್ಲಿ ನಿಮ್ಹಾನ್ಸ್‌ನ ‘ಸುರಕ್ಷಾ ಪ್ರಾಜೆಕ್ಟ್’ ವತಿಯಿಂದ ಹಮ್ಮಿಕೊಂಡಿದ್ದ ‘ಮನೋಸಂಗಮ 2.0’ ಕಾರ್ಯಕ್ರಮವನ್ನು ನಿಮ್ಹಾನ್ಸ್‌ ನಿರ್ದೇಶಕಿ‌‌ ಡಾ. ಪ್ರತಿಮಾ ಮೂರ್ತಿ ಉದ್ಘಾಟಿಸಿದರು.  

   

ರಾಮನಗರ: ‘ಒತ್ತಡದ ಕಾರಣಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆಧುನಿಕ ಯುಗದಲ್ಲಿ ಮನುಷ್ಯ ತನ್ನ ಭಾವನೆ, ನೋವು–ನಲಿವು, ಕಷ್ಟಗಳನ್ನು ಬೇರೆಯವರ ಜೊತೆ ಹೇಳಿಕೊಳ್ಳಲಾಗದೆ ತನ್ನೊಳಗೆ ಅನುಭವಿಸುತ್ತಾ, ಒತ್ತಡಕ್ಕೆ ಸಿಲುಕುತ್ತಿದ್ದಾನೆ. ಇದರಿಂದಾಗಿ ಆತನಲ್ಲಿ ಆತ್ಮಹತ್ಯೆ ಆಲೋಚನೆಗಳು ಮೂಡುತ್ತಿವೆ’ ಎಂದು ನಿಮ್ಹಾನ್ಸ್‌ ನಿರ್ದೇಶಕಿ‌‌ ಡಾ. ಪ್ರತಿಮಾ ಮೂರ್ತಿ ಹೇಳಿದರು.

ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ನಗರದ ಕಂದಾಯ ಭವನದಲ್ಲಿ ನಿಮ್ಹಾನ್ಸ್‌ನ ‘ಸುರಕ್ಷಾ ಪ್ರಾಜೆಕ್ಟ್’ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಮನೋಸಂಗಮ 2.0’ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯ ಆಧಾರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ’ ಎಂದರು.

ADVERTISEMENT

‘ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒತ್ತಡ ನಿರ್ವಹಣೆ ಹಾಗೂ ಅವರ ಮನಸ್ಥಿತಿಗೆ ವಿರುದ್ಧವಾದ ಪರಿಸ್ಥಿತಿ ನಿಭಾಯಿಸುವ ಕೌಶಲವನ್ನು ಅವರಲ್ಲಿ ಬೆಳೆಸಬೇಕಾದ ಜವಾಬ್ದಾರಿ ತಂದೆ–ತಾಯಿ ಹಾಗೂ ಶಿಕ್ಷಕರ ಮೇಲಿದೆ. ಸೋಲು–ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಸ್ಪರ್ಧಾತ್ಮಕ ಮನೋಭಾವವನ್ನು ಅವರಲ್ಲಿ ಬೆಳೆಸಬೇಕಿದೆ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆರಂಭಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮತ್ತು ಪೊಲೀಸ್ ಠಾಣೆಗಳಿಗಾಗಿ ‘ಸುರಕ್ಷಾ ಆತ್ಮಹತ್ಯೆ ಮತ್ತು ಸ್ವಯಂ ಹಾನಿ ರಿಜಿಸ್ಟರ್’ ಅನ್ನು ಡಾ. ಪ್ರತಿಮಾ ಮೂರ್ತಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಸವಿತಾ ಪಿ.ಆರ್. ಉದ್ಘಾಟಿಸಿದರು. ಈ ರಿಜಿಸ್ಟರ್‌ಗಳು, ಆತ್ಮಹತ್ಯೆ ತಡೆಗಟ್ಟುವಿಕೆ ಮತ್ತು ಬೆಂಬಲ ಸೇವೆಗಳ ಕಾರ್ಯತಂತ್ರಗಳನ್ನು ರೂಪಿಸಲು ಮಾಹಿತಿ ಸಂಗ್ರಹಿಸುತ್ತವೆ.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರ್, ನಿಮ್ಹಾನ್ಸ್‌ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಜನಾರ್ಧನ್, ಪ್ರಾಧ್ಯಾಪಕ ಡಾ. ಧನಶೇಖರ್ ಪಾಂಡಿಯನ್, ಮಹೇಂದ್ರ ಎಂ.ಜೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಟಿ. ದೀಪಕ್‌ ಕುಮಾರ್, ಪ್ರಾಧ್ಯಾಪಕರು ಹಾಗೂ ಇತರರು ಇದ್ದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಂದ ಕಂದಾಯ ಭವನದವರೆಗೆ ನಡಿಗೆ ಜಾಥಾ ನಡೆಸಿದರು. ಕಂದಾಯ ಭವನದಲ್ಲಿ ಸರ್ಕಾರಿ ಇಲಾಖೆಗಳು ಮತ್ತು ನಿಮ್ಹಾನ್ಸ್‌ನಿಂದ ಮಾನಸಿಕ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

ಆತ್ಮಹತ್ಯೆ ತಡೆಗಟ್ಟುವ ಕುರಿತು ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಸ್ಥಳೀಯ ನಾಟಕ ತಂಡಗಳು ಭರವಸೆ ಮತ್ತು ಧೈರ್ಯದ ಸಂದೇಶಗಳನ್ನು ಸಾರುವ ಬೀದಿ ನಾಟಕಗಳನ್ನು ಪ್ರದರ್ಶಿಸಿದವು. ನಿಮ್ಹಾನ್ಸ್‌ನ ಬ್ರೈನ್ ಮ್ಯೂಸಿಯಂನಲ್ಲಿ ಮಿದುಳಿನ ಕುರಿತು ಸಂವಾದಾತ್ಮಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಂಚೆ ರಾಮನಗರದ ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಿಂದ ಕಂದಾಯ ಭವನದವರೆಗೆ ಹಮ್ಮಿಕೊಂಡಿದ್ದ ವಾಕಾಥಾನ್‌ನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು

‘ನಿರಂತರ ಜಾಗೃತಿ ಕಾರ್ಯಕ್ರಮ’

‘ಆತ್ಮಹತ್ಯೆ ತಡೆಗಟ್ಟಲು ಸುರಕ್ಷಾ ಪ್ರಾಜೆಕ್ಟ್ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ‘ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರಿಗೆ ಮಾರ್ಗದರ್ಶನ ಹಾಗೂ ಕುಟುಂಬಗಳಿಗೂ ಸಮಾಲೋಚನೆ ಒದಗಿಸುತ್ತಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ನಿಮ್ಹಾನ್ಸ್‌ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ. ಅನೀಶ್ ವಿ. ಚೆರಿಯನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.