ರಾಮನಗರ: ಬಿಸಿಯೂಟ ತಯಾರಕರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ನೌಕರರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷೆ ನಿರ್ಮಲಾ ಮಾತನಾಡಿ, ಈ ವರ್ಷ ರಾಜ್ಯದಾದ್ಯಂತ 60ವರ್ಷ ದಾಟಿ ಕೆಲಸದಿಂದ ಬಿಡುಗಡೆಯಾದ ಎಲ್ಲ ಬಿಸಿಯೂಟ ತಯಾರಕರಿಗೆ ₹1.5ಲಕ್ಷ ಇಡಗಂಟು ಹಣ ನೀಡಬೇಕು. ₹2ಲಕ್ಷ ಅಪಘಾತ ವಿಮೆ ಜಾರಿಗೆ ತರಬೇಕು. ಕೆಲಸ ಸಂದರ್ಭದಲ್ಲಿ ಆಗುವ ಅಪಘಾತ ಪರಿಹಾರ ಹಣ ಪಡೆಯಲು ಇಲಾಖೆ ಕಡ್ಡಾಯಗೊಳಿಸಿರುವ ಪೊಲೀಸ್ ಠಾಣೆ ಎಫ್‌ಐಆರ್ ರದ್ದುಗೊಳಿಸಿ ಪರಿಹಾರ ಪಡೆಯಲು ಸುಲಭಗೊಳಿಸುವಂತೆ ಘೋಷಿಸಬೇಕು ಎಂದು ಆಗ್ರಹಿಸಿದರು.
ದಸರಾ ರಜೆ, ಬೇಸಿಗೆ ರಜೆ ಸೇರಿದಂತೆ ಒಟ್ಟು 12 ತಿಂಗಳ ವೇತನ ನೀಡಬೇಕು. ನಿಯಮದಂತೆ ಪ್ರತಿ ತಿಂಗಳ 5ರೊಳಗೆ ವೇತನ ನೀಡಬೇಕು. ಅಕಾಲಿಕ ಮರಣಕ್ಕೆ ತುತ್ತಾದ ಬಿಸಿಯೂಟ ಕಾರ್ಮಿಕ ಹೆಣ್ಣು ಮಕ್ಕಳಿಗೆ ಕೂಡಲೇ ಸೇವಾ ಭದ್ರತೆ ಜಾರಿಗೆ ತರಬೇಕು. ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ಯೋಜನೆಯು ಖಾಸಗೀಕರಣ ಮಾಡದೆ ಸರ್ಕಾರದ ವ್ಯಾಪ್ತಿಯಲ್ಲಿಯೇ ಹೊಂದಿರಬೇಕು. ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಬಿಡಿಸಲು ಕೇವಲ ₹30.ಪೈಸೆ ನೀಡುತ್ತಿದ್ದು, ಇದನ್ನು ಸಂಭಾವನೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ತಯಾರಕರಾಗಿ 1.20 ಲಕ್ಷ ಮಂದಿ ದುಡಿಯುತ್ತಿದ್ದಾರೆ. ಹೀಗಾಗಿ ಅಡುಗೆ ತಯಾರಕರಿಗೆ ಮಾಸಿಕ ₹600 ಮಾತ್ರ ನೀಡಲಾಗುತ್ತಿದೆ. ಈ ಸಂಭಾವನೆಯಲ್ಲಿ ಬಿಸಿಯೂಟ ತಯಾರಕರು ಇಂದಿನ ಬೆಲೆ ಏರಿಕೆ ದಿನದಲ್ಲಿ ಜೀವನ ನಡೆಸಲು ಕಷ್ಟ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ರೋಸ್ ಮೇರಿ, ಶಂಭುಗೌಡ, ಶಶಿಕಲಾ, ಅನಸೂಯಮ್ಮ, ಮಂಗಳ, ಸುನೀತಾ, ಭಾರತಿ, ದೇವಮ್ಮ, ಸಿದ್ದರಾಜು, ಸಾಕಮ್ಮ, ಶಾಂತಮ್ಮ, ಶರ್ಮೀಳಾ, ಲಲಿತಾ, ರತ್ನಮ್ಮ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.