ಮಾಗಡಿಯ ಬಾಲಾಜಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷ ಡಿ.ಕೆ. ಸುರೇಶ್, ಉಪಾಧ್ಯಕ್ಷ ಕೆಇಬಿ ರಾಜಣ್ಣ, ನಿರ್ದೇಶಕರಾದ ಎಚ್.ಎನ್. ಅಶೋಕ್, ಪಿ. ನಾಗರಾಜ್ ಸೇರಿದಂತೆ ಎಲ್ಲಾ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು.
ಮಾಗಡಿ: ‘ಬೆಂಗಳೂರು ಹಾಲು ಒಕ್ಕೂಟದ ಸಾಮರ್ಥ್ಯ 25 ಲಕ್ಷ ಲೀಟರ್. ಈಗ 15 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. ಒಕ್ಕೂಟದಲ್ಲಿ 1.28 ಲಕ್ಷ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಇನ್ನೂ 10 ಲಕ್ಷ ಲೀಟರ್ ಹಾಲು ಪೂರೈಕೆಯಾದರೆ ರೈತರಿಗೆ ನೀಡುವ ದರ ಹೆಚ್ಚಿಸಬಹುದು’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಪಟ್ಟಣದ ಬಾಲಾಜಿ ಬ್ಯಾಂಕ್ವೆಟ್ ಹಾಲಿನಲ್ಲಿ ಬಮೂಲ್ ಆಡಳಿತ ಮಂಡಳಿ ನಿರ್ದೇಶಕರಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ‘ಬಮೂಲ್ ನಿರ್ದೇಶಕನಾಗಬೇಕೆಂಬ ಆಸೆ ನನಗಿರಲಿಲ್ಲ. ಶಾಸಕರುಗಳ ಒತ್ತಡದಿಂದಾಗಿ ನಿರ್ದೇಶಕನಾಗಿ, ಇದೀಗ ಅಧ್ಯಕ್ಷನಾದೆ’ ಎಂದರು.
‘ಸಂಸ್ಥೆ ಬಗ್ಗೆ ಎಲ್ಲರೂ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವುಗಳನ್ನು ಈಡೇರಿಸಬೇಕಾದರೆ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ಬಮೂಲ್ ಬಗ್ಗೆ ನನಗೆ ಅನುಭವ ಇಲ್ಲ. ಈಗ ಎಲ್ಲಾ ಮಾಹಿತಿ ಪಡೆಯುತ್ತಿದ್ದೇನೆ. ರೈತರು ಹಾಲಿನ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಲಾಭ ಪಡೆಯಬಹುದು’ ಎಂದು ತಿಳಿಸಿದರು.
‘ರೈತರ ಬೆವರ ಹನಿಯಲ್ಲಿ ಬಮೂಲ್ ಕಟ್ಟಲಾಗಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮಾಗಡಿಯಲ್ಲಿ ಫೀಡ್ ಕಾರ್ಖಾನೆ ನಿರ್ಮಾಣ ಮಾಡುವಂತೆ ಇಲ್ಲಿಯವರು ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.
ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ನಮ್ಮ ತಾಲ್ಲೂಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ಆಡಳಿತ ಮಂಡಳಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದೇವೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ. ಸುರೇಶ್ ಅವರು ಕೆಎಂಎಫ್ ಅಧ್ಯಕ್ಷರಾಗಿ ರೈತರಿಗೆ ಇನ್ನಷ್ಟು ಅನುಕೂಲತೆ ಮಾಡಬೇಕು’ ಎಂದು ಮನವಿ ಮಾಡಿದರು.
‘ಹೇಮಾವತಿ, ಎತ್ತಿನಹೊಳೆ, ಸತ್ತೇಗಾಲ ಯೋಜನೆ ಜಾರಿಯಲ್ಲಿ ಸುರೇಶ್ ಅವರ ಪಾತ್ರ ಬಹಳಷ್ಟಿದೆ. ಮುಂದಿನ ತಿಂಗಳು ಮೊದಲ ಹಂತದ ಹೇಮಾವತಿ ಯೋಜನೆಗೆ ಚಾಲನೆ ಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಇದಕ್ಕೆ ಕಾರಣರಾದ ಸುರೇಶ್ ಅವರನ್ನು ನೆನೆಯಬೇಕು’ ಎಂದು ಕೃತಜ್ಞತೆ ಸಲ್ಲಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ‘ನಾನು ಶಾಸಕನಾಗಿದ್ದಾಗ ಮಾಗಡಿಯಲ್ಲಿ ಕೇವಲ 32 ಇದ್ದ ಡೇರಿಗಳ ಸಂಖ್ಯೆ ಈಗ 350 ದಾಟಿದೆ. ಹೈನುಗಾರಿಕೆಯಲ್ಲಿ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ರೈತರಿಗೆ ಅನುಕೂಲಕ್ಕಾಗಿ ಸುರೇಶ್ ಅವರು ಮಾಗಡಿಗೂ ಹೆಚ್ಚಿನ ಯೋಜನೆಗಳನ್ನು ಕೊಡಬೇಕು’ ಎಂದು ಒತ್ತಾಯಿಸಿದರು.
ಬಮೂಲ್ ನಿರ್ದೇಶಕ ಎಚ್. ಎನ್. ಅಶೋಕ್, ‘ಬಮೂಲ್ ಉತ್ತಮ ಆಡಳಿತ ಮಂಡಳಿ ಹೊಂದಿದೆ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ರೈತಪರವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲ ಮಾಡಿ ಕೊಡಲಿದ್ದೇವೆ’ ಎಂದು ತಿಳಿಸಿದರು.
ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನೂತನ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಉಪಾಧ್ಯಕ್ಷ ಕೆಇಬಿ ರಾಜಣ್ಣ, ನಿರ್ದೇಶಕರಾದ ಪಿ. ನಾಗರಾಜು, ಎಚ್.ಎನ್. ಅಶೋಕ್, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜೆ.ಪಿ. ಚಂದ್ರೇಗೌಡ, ಬಿ.ಎಸ್. ಕುಮಾರ್ ಹಾಗೂ ಇತರರು ಇದ್ದರು.
ರೈತರಿಗಾಗಿ ಇರುವ ಸಂಸ್ಥೆಗೆ ಬಂದಿರುವ ನಾನು ಬಮೂಲ್‌ನಿಂದ ನೀಡುವ ಕಾರನ್ನು ಬಳಸುವುದಿಲ್ಲ. ಸಂಬಳ ಕೂಡ ಪಡೆಯುವುದಿಲ್ಲ. ರೈತರಿಗೆ ಅನುಕೂಲವಾಗುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ
ಡಿ.ಕೆ. ಸುರೇಶ್ ಬಮೂಲ್ ಅಧ್ಯಕ್ಷ
ಇನ್ನೈದು ವರ್ಷದಲ್ಲಿ ಹಾಲಿನ ದರ ಕನಿಷ್ಠ ₹5 ಹೆಚ್ಚಿಸಬೇಕು. ಬಿಜೆಪಿಯವರು ವಿರೋಧಿಸಿದರೆ ದರ ಹೆಚ್ಚಲ ಬೆಂಬಲಿಸಿ ನಾವು ಅವರ ವಿರುದ್ಧ ಹೋರಾಡುತ್ತೇವೆ. ಸುರೇಶ್ ಅವರು ಸಂಸದರಾಗಿದ್ದರೆ ತಾಲ್ಲೂಕಿಗೆ ಸಾಕಷ್ಟು ಯೋಜನೆಗಳು ಬರುತ್ತಿದ್ದವು
ಎಚ್.ಸಿ. ಬಾಲಕೃಷ್ಣ ಶಾಸಕ
‘ಎರಡು ತಿಂಗಳಿಂದ ನಷ್ಟದಲ್ಲಿದೆ ಬಮೂಲ್’
‘ಕಳೆದರಡು ತಿಂಗಳಿಂದ ಬಮೂಲ್ ನಷ್ಟದಲ್ಲಿ ನಡೆಯುತ್ತಿದೆ. ಎರಡು ತಿಂಗಳ ಹಿಂದೆ ₹9.5 ಕೋಟಿ ಇದ್ದ ನಷ್ಟ ಕಳೆದ ತಿಂಗಳು ₹3.5 ಕೋಟಿಯಾಗಿದೆ. ಮುಂದೆ ಎಷ್ಟು ನಷ್ಟವಾಗಲಿದೆ ಎಂಬುದು ಗೊತ್ತಿಲ್ಲ. ರೈತರ ಹಸು ಖರೀದಿಗೆ ಶೇ 3ರ ರ ಬಡ್ಡಿ ದರದಲ್ಲಿ ₹2 ಲಕ್ಷದವರೆಗೂ ಸಾಲ ವಿತರಿಸಲಾಗುತ್ತಿದೆ. ರೈತರು ಹೆಚ್ಚು ಹಸುಗಳನ್ನು ಸಾಕಿ ಗುಣಮಟ್ಟದ ಹಾಲನ್ನು ನೀಡಬೇಕು. ನಮ್ಮ ಕಾರ್ಯದರ್ಶಿಗಳು ಸ್ಥಳೀಯವಾಗಿ ನಡೆಯುವ ಸಮಾರಂಭಗಳಿಗೆ ನಂದಿನಿ ಹಾಲು ನಂದಿನಿ ಪನ್ನೀರು ಪದಾರ್ಥಗಳನ್ನು ಬಳಸುವಂತೆ ನಮಗೆ ಬೇಡಿಕೆ ಕೊಟ್ಟರೆ ನಮ್ಮ ಉತ್ಪನ್ನಗಳು ಹೆಚ್ಚು ಮಾರಾಟವಾಗಿ ಮಾರುಕಟ್ಟೆಯೂ ವಿಸ್ತರಣೆಯಾಗುತ್ತದೆ. ಆಗ ಹೊರ ರಾಜ್ಯಗಳಿಗೆ ಮಾರಾಟ ಮಾಡುವ ಅಗತ್ಯವಿರುವುದಿಲ್ಲ. ಈ ಬಗ್ಗೆ ಸ್ಥಳೀಯ ಕಾರ್ಯದರ್ಶಿಗಳು ಆಸಕ್ತಿ ತೋರಬೇಕು’ ಎಂದು ಡಿ.ಕೆ. ಸುರೇಶ್ ಸಲಹೆ ನೀಡಿದರು.
‘ಎಕ್ಸ್‌ಪ್ರೆಸ್ ಕೆನಾಲ್ ಮಾಡೇ ಮಾಡುತ್ತೇವೆ’
‘ಮಾಗಡಿ ತಾಲ್ಲೂಕಿನ ಜನರು ಕಾವೇರಿ ಕೊಳ್ಳದಲ್ಲಿದ್ದಾರೆಯೇ ಹೊರತು ತಮಿಳುನಾಡಿನಲ್ಲಿ ಅಲ್ಲ. ತುಮಕೂರಿನವರು ಹೇಮಾವತಿಗೆ ವಿರೋಧ ಮಾಡುವುದು ಸರಿಯಲ್ಲ. ರಾಜಕೀಯವಾಗಿ ವಿರೋಧಿಸಿದರೆ ನಾವು ಕೂಡ ತುಮಕೂರಿನವರಿಗೆ ತಕ್ಕ ಉತ್ತರ ಕೊಡಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ಪೂರ್ಣ ಮಾಡಿಯೇ ತಿರುತ್ತೇವೆ. ಎತ್ತಿನಹೊಳೆ ಮೂಲಕ ತುಮಕೂರಿಗೂ ನೀರು ಕೊಡುವ ಕೆಲಸ ಮಾಡುತ್ತೇವೆ’ ಎಂದು ಡಿ.ಕೆ. ಸುರೇಶ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.