ADVERTISEMENT

ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯ

ಮಾಗಡಿ: ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 4:37 IST
Last Updated 17 ಫೆಬ್ರುವರಿ 2022, 4:37 IST
ಮಾಗಡಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿಗೆ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಚಾಲನೆ ನೀಡಿದರು. ಸಿ. ಜಯರಾಮ್‌, ಕಾರ್ತಿಕ್‌, ಚಂದ್ರೇಗೌಡ, ಶಿವಕುಮಾರ್‌, ಜಿ. ಕೃಷ್ಣ ಹಾಜರಿದ್ದರು
ಮಾಗಡಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿಗೆ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಚಾಲನೆ ನೀಡಿದರು. ಸಿ. ಜಯರಾಮ್‌, ಕಾರ್ತಿಕ್‌, ಚಂದ್ರೇಗೌಡ, ಶಿವಕುಮಾರ್‌, ಜಿ. ಕೃಷ್ಣ ಹಾಜರಿದ್ದರು   

ಮಾಗಡಿ: ‘ದೆಹಲಿಯ ಕೆಂಪುಕೋಟೆ ಮೇಲಿನ ತ್ರಿವರ್ಣ ಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್‌. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ಆಗ್ರಹಿಸಿದರು.

ಪಟ್ಟಣದ ಕಲ್ಯಾಗೇಟ್‌ ಬಳಿ ಇರುವ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷದ ಗುರುತಿನ ಚೀಟಿ ಇಟ್ಟುಕೊಂಡು ಪೊಲೀಸ್‌ ಠಾಣೆಗೆ ಹೋಗಿ ಬಂದು ಜನರಿಂದ ರೋಲ್‌ಕಾಲ್‌ ಮಾಡುವವರನ್ನು ಬೆಳೆಸಬಾರದು. ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸಿ ಸಹಾಯ ಮಾಡುವವರನ್ನು ತಯಾರು ಮಾಡಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ಅಲ್ಪಸಂಖ್ಯಾತ ಮಹಿಳೆಯರು ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಾಬ್‌ ಧರಿಸುತ್ತಿದ್ದಾರೆ. ಮುಸ್ಲಿಂಮರು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಬಂದಿಲ್ಲ. ಧರ್ಮದ ಹೆಸರು, ಪಾಕಿಸ್ತಾನ ಮತ್ತು ಚೀನಾದ ಹೆಸರು ಹೇಳಿಕೊಂಡು ಬಿಜೆಪಿಯವರು ಖ್ಯಾತೆ ತೆಗೆಯುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸೋಲುವುದು ಖಚಿತ ಎಂದು ಮನವರಿಕೆಯಾದ ಕೂಡಲೇ ಜನರ ಗಮನ ಬೇರೆಡೆ ಸೆಳೆಯಲು ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಾಯಣಗುರು ಭಾವಚಿತ್ರ ಇಡದೆ ಭೇದ ತೋರಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕರಾವಳಿಯಲ್ಲಿ ಸಾರ್ವಜನಿಕರಿಂದ ವಿರೋಧ ಕಾಣಿಸಿದ ಕೂಡಲೇ ಹಿಜಾಬ್‌, ಕೇಸರಿ ಶಾಲು ವಿವಾದ ಸೃಷ್ಟಿಸಿದ್ದಾರೆ ಎಂದು
ಟೀಕಿಸಿದರು.

ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಮಾತನಾಡಿ, ಸದಸ್ಯತ್ವ ಹೆಚ್ಚಿಗೆ ಮಾಡಿಸಿದ ಯುವಕರಿಗೆ ₹ 50 ಸಾವಿರ ನಗದು ಬಹುಮಾನ ನೀಡಲಾಗುವುದು. ಎಲ್ಲಾ ಗ್ರಾಮಗಳಿಗೆ ಅಭಿಯಾನಕ್ಕೆ ಹೋಗಬೇಕಿದೆ. ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಜೊತೆಯಲ್ಲಿಟ್ಟುಕೊಂಡು ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಸಲಹೆ ನೀಡಿದರು.

ಕೆಎ ಆರ್‌ಟಿಸಿ ಬಸ್‌ ದರ ಏರಿಕೆ ವಿರುದ್ಧ ಫೆ. 18ರಂದು ಮಧ್ಯಾಹ್ನ 2ಗಂಟೆಗೆ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡದೆ ಇರುವ ಸರ್ಕಾರದ ವಿರುದ್ಧ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಎಚ್‌.ಎನ್‌. ಅಶೋಕ್‌ ಮಾತನಾಡಿದರು. ಪುರಸಭೆ ಸದಸ್ಯರಾದ ಎಚ್‌.ಜೆ. ಪುರುಷೋತ್ತಮ್‌, ರಿಯಾಜ್‌, ಶಿವಕುಮಾರ್‌, ಮುಖಂಡರಾದ ಸಿ. ಜಯರಾಮ್‌, ತೇಜಸ್‌ಕುಮಾರ್‌, ಸಿ.ಎಂ. ಮಾರೇಗೌಡ, ಚಂದ್ರೇಗೌಡ, ವಿಜಯಕುಮಾರ್‌, ಕುದೂರಿನ ಲೋಕೇಶ್‌, ಬಸವೇನಹಳ್ಳಿ ಸುರೇಶ್‌, ದೊಡ್ಡಿಲಕ್ಷ್ಮಣ್‌, ಜಿ. ಕೃಷ್ಣ, ಗೆಜಗಾರುಗುಪ್ಪೆ ಕುಮಾರ್‌, ಸಾತನೂರಿನ ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.