ADVERTISEMENT

ರಾಮನಗರ: ಶಕ್ತಿ ದೇವತೆಗೆ ಮಡಿಲಕ್ಕಿ ಅರ್ಪಿಸಿದ ಹುಸೇನ್

12 ದೇವಾಲಯಗಳಲ್ಲಿ ಪೂಜೆ; ಚಾಮುಂಡಿ ಉತ್ಸವದ ತಯಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 5:52 IST
Last Updated 22 ಜುಲೈ 2024, 5:52 IST
ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ, ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಭಾನುವಾರ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ದೇವಾಲಯಕ್ಕೆ ಮಡಿಲಕ್ಕಿ ಅರ್ಪಿಸಿದರು
ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ, ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಭಾನುವಾರ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ದೇವಾಲಯಕ್ಕೆ ಮಡಿಲಕ್ಕಿ ಅರ್ಪಿಸಿದರು   

ರಾಮನಗರ: ನಗರದ ಚಾಮುಂಡೇಶ್ವರಿ ಹಾಗೂ ಇತರ ಶಕ್ತಿ ದೇವತೆಗಳ ಕರಗ ಮಹೋತ್ಸವದ ಅಂಗವಾಗಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಭಾನುವಾರ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ, ನಗರದ 12 ಶಕ್ತಿ ದೇವತೆಗಳ ದೇಗುಲಗಳಿಗೆ ಭೇಟಿ ನೀಡಿ ಮಡಿಲಕ್ಕಿ ಅರ್ಪಿಸಿದರು. ಜುಲೈ 23ರಂದು ನಡೆಯುವ ಚಾಮುಂಡಿ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮೊದಲಿಗೆ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ದೇವಾಲಯದಿಂದ ಆರಂಭಿಸಿ, ದ್ಯಾವರಸೇಗೌಡನದೊಡ್ಡಿಯ ಚಾಮುಂಡೇಶ್ವರಿ ದೇವತೆ, ಗಾಂಧಿನಗರದ ಆದಿಶಕ್ತಿ, ಚಾಮುಂಡೇಶ್ವರಿ ಅಮ್ಮನವರ ದೇವಾಲಯ, ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿ, ತೋಪಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದಕೇರಿಯ ಮಾರಮ್ಮ, ಬಂಡಾರಮ್ಮ, ಟ್ರೂಪ್‌ಲೇನ್‌ನ ಬಂಡಿ‌ ಮಹಾಂಕಾಳಮ್ಮ, ಐಜೂರಿನ ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ದೇವಾಲಯಗಳಿಗೆ ಹುಸೇನ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಅರಿಶಿನ– ಕುಂಕುಮ, ಸೀರೆ, ಬಳೆ, ವೀಳ್ಯದೆಲೆ, ಅಡಿಕೆ ಹೊಂಬಾಳೆ, ಮಡಿಲಕ್ಕಿ‌ ಸಾಮಾನು, ಬಿಚ್ಚಾಲೆ, ಪಂಚ ಫಲಗಳನ್ನು ಒಳಗೊಂಡ ಪೂಜಾ ಸಾಮಗ್ರಿಗಳನ್ನು ಮರದ ಬುಟ್ಟಿಯಲ್ಲಿರಿಸಿ ದೇವತೆಗಳಿಗೆ ಅರ್ಪಿಸಿ ಕಾಣಿಕೆ ನೀಡುವ ಮೂಲಕ, ಮಡಿಲಕ್ಕಿ ಸಮರ್ಪಣೆ ಮಾಡಿದರು. ನಗರದಲ್ಲಿ ಸುಖ–ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ‌ ಸಂಪ್ರದಾಯದ ಪ್ರಕಾರ ಆಷಾಢ, ಶ್ರಾವಣ ಹಾಗೂ ನವರಾತ್ರಿಯ ಸಂದರ್ಭದಲ್ಲಿ ದೇವತೆಗಳಿಗೆ ಮಡಿಲಕ್ಕಿ ಕೊಡುವುದು ವಾಡಿಕೆ. ಅದರಂತೆ, ಕಳೆದ ಮೂರು ವರ್ಷಗಳಿಂದ ಚಾಮುಂಡೇಶ್ವರಿ ಕರಗ ನಡೆಯುವಾಗ ನಗರದ ಶಕ್ತಿ ದೇವತೆಗಳಿಗೆ ಮಡಿಲಕ್ಕಿ ಸೇವೆ ಮಾಡುತ್ತಾ ಬಂದಿದ್ದೇನೆ’ ಎಂದರು.

‘ಚಾಮುಂಡೇಶ್ವರಿ ತಾಯಿ ಈ ನಾಡಿನ ಶಕ್ತಿದೇವತೆ. ಪಟ್ಟಣದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ತಾಯಿ ನೋಡಿಕೊಂಡಿದ್ದಾಳೆ. ಅದರಿಂದಲೇ ರಾಮನಗರ ಮಣ್ಣಿಗೆ ವಿಶೇಷ ಸ್ಥಾನ, ಗೌರವ ಲಭಿಸಿದೆ. ಈ ಪರಂಪರೆಯನ್ನು ಮುಂದಿನ ಜನಾಂಗದವರು ಸಹ ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.

ದೇವಾಲಯಗಳ ಭೇಟಿ ಬಳಿಕ ಚಾಮುಂಡಿ ಉತ್ಸವದ ಅಂತಿಮ ಸಿದ್ಧತೆಗಳನ್ನು ಹುಸೇನ್ ಪರಿಶೀಲಿಸಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಮಾಜಿ ಶಾಸಕ ಕೆ. ರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಪ್ರಧಾನ‌ ಕಾರ್ಯದರ್ಶಿ ಶ್ರೀನಿವಾಸ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ನಗರಸಭೆ ಸದಸ್ಯರಾದ ಬಿ.ಸಿ. ಪಾರ್ವ ತಮ್ಮ, ವಿಜಯಕುಮಾರಿ, ಮುಖಂಡರಾದ‌ ಸಿ.ಎನ್.ಆರ್. ವೆಂಕಟೇಶ್, ಜಗದೀಶ್, ಷಡಕ್ಷರಿ, ಶಿವಶಂಕರ್, ಶಿವಲಿಂಗಯ್ಯ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.