ADVERTISEMENT

ಕುಮಾರಸ್ವಾಮಿಗೆ ಎಲ್ಲೋದ್ರು ಬೆಂಕಿ ಹಚ್ಚೋದೆ ಕೆಲಸ: ಬಾಲಕೃಷ್ಣ ಆಕ್ರೋಶ

ನಾಗಮಂಗಲ ಗಲಭೆ ಪ್ರಾಯೋಜಿತ: ಎಚ್‌ಡಿಕೆ ಹೇಳಿಕೆಗೆ ಬಾಲಕೃಷ್ಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:23 IST
Last Updated 13 ಸೆಪ್ಟೆಂಬರ್ 2024, 14:23 IST
ಎಚ್‌.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ಎಚ್‌.ಸಿ. ಬಾಲಕೃಷ್ಣ, ಮಾಗಡಿ ಶಾಸಕ   

ಮಾಗಡಿ: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಲ್ಲೇ ಹೋದರೂ ಬೆಂಕಿ ಹಚ್ಚೋದೆ ಕೆಲಸ. ಅವರು ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳಿಲ್ಲ. ಅವರ ಮನಸ್ಥಿತಿಯೂ ಹಾಗೆಯೇ ಇದ್ದು, ಅದಕ್ಕೆ ತಕ್ಕಂತೆ ಮಾತನಾಡಿದ್ದಾರೆ’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

‘ನಾಗಮಂಗಲ ಗಲಭೆ ಕಾಂಗ್ರೆಸ್ ಪ್ರಾಯೋಜಿತ’ ಎಂಬ ಕುಮಾರಸ್ವಾಮಿ ಆರೋಪ ಕುರಿತು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬೆಂಕಿ ಇಡುವ ಕೆಲಸವನ್ನು ಎಚ್‌ಡಿಕೆ ಮೊದಲು ಬಿಡಲಿ. ನಾನು ಸಂಸದನಾದ 24 ಗಂಟೆಯೊಳಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ. ಪ್ರಧಾನಿ ಮೋದಿ ಅವರನ್ನು ‌ಕರೆದುಕೊಂಡು ಬಂದು ಉದ್ಘಾಟನೆ ಮಾಡಿಸುತ್ತೇನೆ‌ ಎಂದಿದ್ದರು. ಮೊದಲು ಆ ಕೆಲಸ ಮಾಡಲಿ’ ಎಂದರು.

‘ಕಾಂಗ್ರೆಸ್ ಒಂದು ಕೋಮಿನ ಓಲೈಕೆ ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಅವರೇ ಪ್ರಕರಣವನ್ನು ತನಿಖೆ ಮಾಡಲಿ. ಈ ಕುರಿತು ನಾನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಅವರನ್ನೇ ತನಿಖಾಧಿಯಾರಿಯನ್ನಾಗಿ ಮಾಡಿ. ಅವರ ತನಿಖೆಯಿಂದಲೇ ಎಲ್ಲ ಹೊರಗಡೆ ಬರಲಿ’ ಎಂದು ತಿರುಗೇಟು ನೀಡಿದರು.

ADVERTISEMENT

‘ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಗಲಭೆ ಮಾಡಿಸಿದ್ದಾರೆ ಎಂದಿರುವ ಕುಮಾರಸ್ವಾಮಿ ಅವರ ಮನಸ್ಥಿತಿ ಎಂತಹದ್ದು ಎಂಬುದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಯಾವುದೇ ಒಂದು ಧರ್ಮವನ್ನು ಓಲೈಕೆ‌ ಮಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ.‌ ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಸಹಿಸಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.